
ಫ್ಲೊರಿಡಾ (ಅಮೆರಿಕಾ), ಮೇ ೧೯- ವಿಶ್ವದ ಪ್ರಮುಖ ನಿರ್ಮಾಪಕ, ಮನರಂಜನೆ ಮತ್ತು ಮಾಹಿತಿ ಪೂರೈಕೆ ಕಂಪೆನಿಗಳ ಪೈಕಿ ಅಗ್ರಸ್ಥಾನದಲ್ಲಿರುವ ವಾಲ್ಟ್ ಡಿಸ್ನಿ ನಿನ್ನೆ ತನ್ನ ಬಹುನಿರೀಕ್ಷಿತ ಬೃಹತ್ ಯೋಜನೆಯಿಂದ ಹಿಂದೆಸರಿದಿದೆ. ಫ್ಲೊರಿಡಾ ರಾಜ್ಯದ ಗವರ್ನರ್ ರಾನ್ ಡೆಸಾಂಟಿಸ್ ಜೊತೆಗಿನ ದ್ವೇಷ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಒರ್ಲ್ಯಾಂಡೊ ಸಮೀಪ ಸ್ಥಾಪಿಸಲು ಉದ್ದೇಶಿಸಿದ್ದ ಸುಮಾರು ೮೦೦೦ ಸಾವಿರ ಕೋಟಿ ರೂ. ಮೌಲ್ಯದ ಬೃಹತ್ ಸಂಕೀರ್ಣ ಯೋಜನೆಯನ್ನು ವಾಲ್ಟ್ ಡಿಸ್ನಿ ರದ್ದುಗೊಳಿಸಿದೆ.
ಕ್ಯಾಲಿಫೋರ್ನಿಯಾದ ಬುರ್‌ಬ್ಯಾಂಕ್‌ನಲ್ಲಿ ಪ್ರಧಾನ ಕಾರ್ಯಾಲಯ ಹೊಂದಿರುವ ವಾಲ್ಟ್ ಡಿಸ್ನಿ, ಅಮೆರಿಕಾದ ಇತರೆಡೆ ಸೇರಿದಂತೆ ಜಗತ್ತಿನ ಹಲವೆಡೆ ಕೂಡ ಕಾರ್ಪೋರೇಟ್ ಕಚೇರಿಗಳನ್ನು ಹೊಂದಿದೆ. ವಿಶ್ವದ ಕೆಲವೇ ಭಾಗಗಳಲ್ಲಿ ವಾಲ್ಟ್ ಡಿಸ್ನಿಯ ಐಷಾರಾಮಿ, ಬೃಹತ್ ಸಂಕೀರ್ಣ ಹೊಂದಿದ್ದು, ಜಗತ್ತಿನ ಭಾರೀ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಾಲ್ಟ್ ಡಿಸ್ನಿ ಸಂಸ್ಥೆ ಇದೇ ರೀತಿಯ ಬೃಹತ್ ಸಂಕೀರ್ಣವನ್ನು ಫ್ಲೊರಿಡಾ ರಾಜ್ಯದ ಒರ್ಲ್ಯಾಂಡೊ ಬಳಿಯ ಲೇಕ್ ನೋನಾದಲ್ಲಿ ಸುಮಾರು ೮೦೦೦ ಸಾವಿರ ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿತ್ತು. ಅಲ್ಲದೆ ಸುಮಾರು ೨೦೦೦ ಕಾರ್ಮಿಕರನ್ನು ಫ್ಲೊರಿಡಾಗೆ ಸ್ಥಳಾಂತರಿಸುವ ಕುರಿತು ನಿರ್ಧಾರ ಮಾಡಲಾಗಿತ್ತು. ಆದರೆ ಫ್ಲೊರಿಡಾದ ರಿಪಬ್ಲಿಕನ್ ಪಕ್ಷದ ಗವರ್ನರ್ ರಾನ್ ಡೆಸಾಂಟಿಸ್ ಜೊತೆಗಿನ ದ್ವೇಷದ ವಾತಾವರಣ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಉದ್ದೇಶಿತ ಬೃಹತ್ ಯೋಜನೆಯನ್ನು ಡಿಸ್ನಿಯ ಥೀಮ್ ಪಾರ್ಕ್ ವಿಭಾಗದ ಮುಖ್ಯಸ್ಥ ಜೋಶ್ ಡಿ’ಅಮಾರೊ ಅವರು ಸ್ಥಗಿತಗೊಳಿಸಿರುವುದಾಗಿ ನಿರ್ಧಾರ ಪ್ರಕಟಿಸಿದ್ದಾರೆ. ಮೂಲಗಳ ಪ್ರಕಾರ ಕಂಪೆನಿಯ ಹಿಂದಿನ ಸಿಇಒ ಆಗಿದ್ದ ಬಾಬ್ ಚಾಪೆಕ್ ಅವರು ಕಳೆದ ನವೆಂಬರ್‌ನಲ್ಲಿ ನಿಧನದಿಂದ ಯೋಜನೆಗೆ ಹಿನ್ನಡೆ ಲಭಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಸಿಇಒ ಬಾಬ್ ಐಗರ್ ಅವರು ಯೋಜನೆಯಿಂದ ಹಿಂದೆಸರಿಯಲು ನಿರ್ಧರಿಸಿದ್ದಾರೆ. ಅದೂ ಅಲ್ಲದೆ ಫ್ಲೊರಿಡಾ ಗವರ್ನರ್ ಜೊತೆಗಿನ ಮುಸುಕಿನ ಗುದ್ದಾಟ ಕೂಡ ಯೋಜನೆ ರದ್ದುಗೊಳ್ಳಲು ಕಾರಣ ಎನ್ನಲಾಗಿದೆ. ಇನ್ನು ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಡಿ’ಅಮಾರೊ, ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಆದರೆ ಇದೊಂದು ಸರಿಯಾದ ನಿರ್ಧಾರ ಎಂದು ಅಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ ಡಿಸ್ನಿಯ ನಿರ್ಧಾರದ ಬಗ್ಗೆ ಫ್ಲೊರಿಡಾ ರಾಜ್ಯದ ಗವರ್ನರ್ ರಾನ್ ಡೆಸಾಂಟಿಸ್ ಅವರ ಕಚೇರಿ ಕೂಡ ಪ್ರತಿಕ್ರಿಯೆ ನೀಡಿದೆ. ಡಿಸ್ನಿ ಸುಮಾರು ಎರಡು ವರ್ಷಗಳ ಹಿಂದೆ ಲೇಕ್ ನೋನಾ ಕ್ಯಾಂಪಸ್‌ನ ಬಗ್ಗೆ ಘೋಷಿಸಿತು. ಆದರೆ ಯೋಜನೆಯಿಂದ ಏನೂ ಆಗಲಿಲ್ಲ ಮತ್ತು ಅದು ಕಾರ್ಯರೂಪಕ್ಕೆ ಬರುತ್ತದೆಯೇ ಎಂದು ನಮಗೆ ಖಚಿತವಿರಲಿಲ್ಲ. ಕಂಪನಿಯ ಆರ್ಥಿಕ ಸಂಕಷ್ಟಗಳು, ಕುಸಿಯುತ್ತಿರುವ ಮಾರುಕಟ್ಟೆ ಮೌಲ್ಯ ಮತ್ತು ಇಳಿಮುಖವಾಗುತ್ತಿರುವ ಸ್ಟಾಕ್ ಬೆಲೆಗಳನ್ನು ಗಮನಿಸಿದರೆ, ಅವರು ತಮ್ಮ ವ್ಯಾಪಾರ ಕಾರ್ಯಾಚರಣೆಗಳನ್ನು ಪುನರ್ ರಚಿಸುತ್ತಾರೆ ಮತ್ತು ವಿಫಲವಾದ ಉದ್ಯಮಗಳನ್ನು ರದ್ದುಗೊಳಿಸಿರುವುದು ಅಚ್ಚರಿ ತಂದಿಲ್ಲ ಎಂದು ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.