ಫ್ಲೈಓವರ್ ಮೇಲಿಂದ ಕೆಳಗೆ ಜಿಗಿದು ಕವಿಕಾ ನೌಕರ ಆತ್ಮಹತ್ಯೆ

ನವೀನ್ ಕುಮಾರ್ ಎಂಬ ೩೦ ವರ್ಷದ ವ್ಯಕ್ತಿ ಇಂದು ಬೆಳಿಗ್ಗೆ ನಾಯಂಡಹಳ್ಳಿ ಮೇಲುಸೇತುವೆ ಬಳಿ ತನ್ನ ಸ್ಕೂಟರ್‌ನ್ನು ನಿಲ್ಲಿಸಿ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರು,ಏ.೧೨-ನಾಯಂಡಹಳ್ಳಿಯ ಫ್ಲೈಓವರ್ ರಸ್ತೆಯ ಮೇಲಿನಿಂದ ಕೆಳಗೆ ಜಿಗಿದು ಕರ್ನಾಟಕ ವಿದ್ಯುತ್ ಕಾರ್ಖಾನೆ(ಕವಿಕಾ)ಯಲ್ಲಿ ಗುತ್ತಿಗೆ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ನವೀನ್ ಕುಮಾರ್ (೩೦) ಆತ್ಮಹತ್ಯೆಗೆ ಶರಣಾದವರು, ಬೈಕ್ ನ್ನು ಫ್ಲೈಓವರ್ ರಸ್ತೆಯಲ್ಲಿ ನಿಲ್ಲಿಸಿ ಏಕಾಏಕಿ ಕೆಳಗೆ ಜಿಗಿದಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಕವಿಕಾದಲ್ಲಿ ಕೆಲಸ ಮಾಡುತ್ತಿದ್ದ ನವೀನ್, ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದಾನೆ. ಬಳಿಕ ಬೈಕ್ ನಿಲ್ಲಿಸಿ ಫ್ಲೈಓವರ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ
೨ ತಿಂಗಳ ಹಿಂದೆಯಷ್ಟೇ ಮದುವೆ:
ಆತ್ಮಹತ್ಯೆ ಮಾಡಿಕೊಂಡ ನವೀನ್ ೨ ತಿಂಗಳ ಹಿಂದೆ ಮದುವೆಯಾಗಿದ್ದು,ಕೆಲಸದ ಮೇಲೆ ಹೋಗಿ ಬರುವುದಾಗಿ ನಿನ್ನೆ ಮನೆಯಿಂದ ಹೊರಟಿದ್ದ ನವೀನ್, ಇಂದ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆತ್ಮಹತ್ಯೆ ಪ್ರಕರಣದ ಕುರಿತು ಬ್ಯಾಟರಾಯನಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.