ಫ್ಲೈಓವರ್ ನಿರ್ಮಾಣ ಕಾಮಗಾರಿ-ಸಮಿತಿ ನೇಮಕ-ಜೋಶಿ


ಹುಬ್ಬಳ್ಳಿ, ಸೆ.26: ಪ್ರಾಯೋಗಿಗಕವಾಗಿ ಚೆನ್ನಮ್ಮ ವೃತ್ತದ ಫ್ಲೈಓವರ್ ನಿರ್ಮಾಣ ಕಾಮಗಾರಿ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ನೇಮಕಮಾಡಲಾಗುವುದು. ಇದರಲ್ಲಿ ಜನ ಪ್ರತಿನಿಧಿಗಳ ಪರವಾಗಿ ಶಾಸಕ ಅರವಿಂದ ಬೆಲ್ಲದ್, ಐ.ಐ.ಟಿ ಅಥವಾ ಬಿ.ವಿ.ಬಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು, ಹೊರ ರಾಜ್ಯದ ಹೆಸರಾಂತ ನಿರ್ಮಾತೃ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್, ಸ್ಪೆಕ್ಟ್ರಮ್ ಕನ್ಸಲಟೆನ್ಸಿ ಹರ್ಷ ರನಾಡೆ
ಇರಲಿದ್ದಾರೆ. ಸಮಿತಿ ಹತ್ತು ದಿನಗಳ ಅವಧಿಯಲ್ಲಿ ವರದಿ ನೀಡಲಿದೆ. ನಿಷ್ಪಕ್ಷಪಾತವಾಗಿ ವರದಿಯನ್ನು ಅವಲೋಕಿಸಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಚೆನ್ನಮ್ಮ ವೃತ್ತದ ಫ್ಲೈಓವರ್ ನಿರ್ಮಾಣದ ಕುರಿತು ಹುಬ್ಬಳ್ಳಿ ಅಶೋಕ ನಗರದ ಕನ್ನಡ ಭವನದಲ್ಲಿ ಜರುಗಿದ ಉದ್ಯಮಿಗಳು,ವರ್ತಕರ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದಾರೆ. ಅನುದಾನ ಬಿಡುಗಡೆಯಾಗಿದೆ. ಚೆನ್ನಮ್ಮ ವೃತ್ತದಲ್ಲಿನ ವಾಹನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಯೋಜನೆಯ ಅನುಷ್ಠಾನದಲ್ಲಿ ಜನಪ್ರತಿನಿಧಿಗಳಿಗೆ ಯಾವುದೇ ರೀತಿಯ ಪ್ರತಿಷ್ಠೆಯಿಲ್ಲ. ಜನರ ಅನುಕೂಲ, ಭವಿಷ್ಯದ ದೃಷ್ಟಿಯಿಂದ ಫ್ಲೈ ಓವರ್ ನಿರ್ಮಿಸಲಾಗುತ್ತಿದೆ. ನಗರದ ಸಂಚಾರಿ ದಟ್ಟಣೆಗೆ ಪರಿಹಾರ ಹುಡುಕಬೇಕಿದೆ. ಸಮಿತಿ ಉದ್ಯಮಿಗಳು,ವರ್ತಕರ ಸಲಹೆಗಳನ್ನು ಸ್ವೀಕರಿಸಲಿದೆ. ಮುಂದಿನ 50 ವರ್ಷಗಳ ತರುವಾಯ ಕೂಡ ಫ್ಪೈಓವರ್ ಜನರ ಬಳಕೆಗೆ ಬರಬೇಕು ಎಂದರು.
ಸಭೆಯಲ್ಲಿ ಸ್ಪೆಕ್ಟ್ರಮ್ ಕನ್ಸ್‍ಲ್‍ಟೆನ್ಸಿ ಹರ್ಷ ರನಾಡೆ ಚೆನ್ನಮ್ಮ ವೃತ್ತದ ಫ್ಲೈಓವರ್ ನಿರ್ಮಾಣದ ತಾಂತ್ರಿಕ ಅಂಶಗಳ ಕುರಿತು ಪ್ರಾತ್ಯಕ್ಷಿಕೆ ನೆಡೆಸಿಕೊಟ್ಟರು. ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಆರ್ಕಿಟೆಕ್ಟ್ ಹಾಗೂ ಕರ್ನಾಟಕ ವಾಣಿಜೋದ್ಯಮ ಸಂಸ್ಥೆಯ ಆನಂದ್ ಪಾಂಡುರಂಗ ಹಾಗೂ ಶರಣ್ ಚೆನ್ನಮ್ಮ ವೃತ್ತದ ಫ್ಲೈಓವರ್ ನಿರ್ಮಾಣ ಕಾಗಮಾರಿ ಅನುಷ್ಠಾನದಲ್ಲಿನ ವಾಸ್ತವ ಅಂಶಗಳು ಹಾಗೂ ಸಮಸ್ಯೆಗಳ ಕುರಿತು ಸಭೆಯ ಗಮನ ಸೆಳೆದರು.
ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬ. ಪಾಟೀಲ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೆÇಲೀಸ್ ಆಯುಕ್ತ ಲಾಭುರಾಮ್, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ವಾ.ಕ.ರ.ಸಾ.ಸಂಸ್ಥೆಯ ಗುರುದತ್ತ ಹೆಗಡೆ ಸೇರಿದಂತೆ ಮತ್ತಿತರರು ಇದ್ದರು.