ಫ್ಲೈಓವರ್ ಅಪಘಾತ; ಮೃತರ ಗುರುತು ಪತ್ತೆ

ಬೆಂಗಳೂರು,ಸೆ.೧೫- ಎಲೆಕ್ಟ್ರಾನಿಕ್ ಸಿಟಿ ಮೇಲುಸೇತುವೆ ರಸ್ತೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಯುವಕ, ಯುವತಿಯ ಗುರುತು ಪತ್ತೆಯಾಗಿದೆ. ನಗರದ ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದ ತಮಿಳುನಾಡು ಮೂಲದ ಪ್ರೀತಮ್(೩೦), ಕೃತಿಕಾ(೨೮) ಮೃತಪಟ್ಟವರಾಗಿದ್ದು ಇವಬ್ಬರೂ ಸ್ನೇಹಿತರಾಗಿದ್ದರು.
ಮೃತರ ಕುಟುಂಬಸ್ಥರು ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಚೆನ್ನೈನಿಂದ ಆಗಮಿಸಿದ್ದು ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಹಸ್ತಾಂತರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸಿಲ್ಕ್ ಬೋರ್ಡ್ ಕಡೆಯಿಂದ ರಾತ್ರಿ ೯.೨೦ರ ವೇಳೆ ಅತಿ ವೇಗವಾಗಿ ಎಲೆಕ್ಟ್ರಾನಿಕ್ ಸಿಟಿಯ ಎಲಿವೇಟೆಡ್ ಮೇಲುಸೇತುವೆ ರಸ್ತೆಯಲ್ಲಿ ಹೋಗುತ್ತಿದ್ದ ಕಾರು ,ಲೇ ಬೈ ಬಳಿ ಬೈಕ್ ನ್ನು ಪಕ್ಕಕ್ಕೆ ಹಾಕಿ ಕುಳಿತಿದ್ದ ಪ್ರೀತಮ್ ಹಾಗೂ ಕೃತಿಕಾಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮೇಲೆ ಕುಳಿತಿದ್ದ ಪ್ರೀತಮ್ ಹಾಗೂ ಕೃತಿಕಾ ೧೦೦ ಮೀಟರ್ ದೂರದವರೆಗೂ ಹಾರಿ ೫೦ಕ್ಕೂ ಹೆಚ್ಚು ಅಡಿಯಿಂದ ಕೆಳಗೆ ಬಿದ್ದು ಛಿದ್ರಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಫ್ಲೈಓವರ್ ಮೇಲಿಂದ ರಸ್ತೆಗೆ ಬಿದ್ದು ಅಪ್ಪಚ್ಚಿಯಾಗಿದ್ದ ಮೃತದೇಹ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮೃತದೇಹಗಳು ಅಪ್ಪಚ್ಚಿಯಾಗಿ ಗುರುತೇ ಸಿಗದಂತಾಗಿದ್ದನ್ನು ಕಂಡು ಬೆಚ್ಚಿಬಿದ್ದಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ. ಬಳಿಕ ಯುವಕ, ಯುವತಿ ಮೃತದೇಹಗಳನ್ನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿ ಅವರ ಬಳಿ ದೊರೆತ ದಾಖಲೆಗಳನ್ನು ಪರಿಶೀಲಿಸಿ ಗುರುತು ವಿಳಾಸ ಪತ್ತೆಹಚ್ಚಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಈ ನಡುವೆ ವೇಗವಾಗಿ ಬಂದು ಡಿಕ್ಕಿ ಹೊಡೆದು ಗಾಯಗೊಂಡಿರುವ ಕಾರು ಚಾಲಕ ಹೆಬ್ಬಗೋಡಿಯ ನಿತೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಗಂಭೀರವಾಗಿದೆ. ಕಾರು ಚಾಲಕನ ನಿರ್ಲಕ್ಷ್ಯ ಅತಿವೇಗವೇ ಅಪಘಾತಕ್ಕೆ ಕಾರಣವಾಗಿದ್ದು, ಅತನ ವಿರುದ್ಧ ಐಪಿಸಿ ಸೆಕ್ಷನ್ ೨೭೯, ೩೦೪(ಎ) ಅಡಿ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭೀಕರ ಘಟನೆ ನಡೆದ ಸ್ಥಳವಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿನ ತಡೆಗೋಡೆ ಬೀಳುವಂತಿದ್ದು ಆತಂಕ ಹೆಚ್ಚಿಸಿದೆ.