ಫ್ಲೆಕ್ಸ್, ಬ್ಯಾನರ್ ತಯಾರಿಕಾ ಘಟಕಗಳ ಮೇಲೆ ಬಿಬಿಎಂಪಿ ದಾಳಿ

ಬೆಂಗಳೂರು, ಆ.1- ಗಾಂಧಿನಗರ ಸುತ್ತಮುತ್ತಲಿನ ಪ್ರದೇಶದಲ್ಲಿರುವ 3 ಫ್ಲೆಕ್ಸ್, ಬ್ಯಾನರ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು 12 ಪ್ಲಾಸ್ಟಿಕ್ ರೋಲ್ ಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ಸಾರ್ವಜನಿಕರ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್, ಪೋಸ್ಟರ್ಸ್ ಹಾಕುವುದನ್ನು ನಿಷೇಧಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರುವುಗೊಳಿಸಲಾಗುತ್ತಿದೆ.

ಈ ಸಂಬಂಧ ಇಂದು ವಲಯ ಆಯುಕ್ತ ಡಾ. ದೀಪಕ್, ಮಾಹಿತಿ ತಂತ್ರಜ್ಞಾನ ನಿರ್ದೇಶಕ ಸೂರ್ಯ ಸೇನ್ ರವರ ನೇತೃತ್ವದಲ್ಲಿ 3 ಫ್ಲೆಕ್ಸ್, ಬ್ಯಾನರ್ಸ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ.

ಪ್ರಮುಖವಾಗಿ, ಶೇಷಾದ್ರಿಪುರ ಪೊಲೀಸ್ ಠಾಣೆಯ ಸುಭೇದಾರ್ ಚತ್ರಂ ರಸ್ತೆಯಲ್ಲಿರುವ ಸಿ.ಎಂ.ರಾಮ್ ಆರ್ಟ್ಸ್ ಗೆ ದಿಢೀರ್ ದಾಳಿ ನಡೆಸಿ 9 ರೋಲ್, ಮುರುಗನ್ ಆರ್ಟ್ಸ್ ಹೆಸರಿನ 2 ಯುನಿಟ್ ಗಳ ಪೈಕಿ ಒಂದು ಯುನಿಟ್ ನಲ್ಲಿದ್ದ 3 ರೋಲ್ ಗಳು ಸೇರಿದಂತೆ ಫ್ಲೆಕ್ಸ್, ಬ್ಯಾನರ್ ಘಟಕಗಳಲ್ಲಿ ವಶಪಡಿಸಿಕೊಂಡ 12 ಪ್ಲಾಸ್ಟಿಕ್ ರೋಲ್ ಗಳನ್ನು ಮಹಜರ್ ಮಾಡಿಕೊಂಡು ಮಾರ್ಷಲ್ ಗಳ ಗಸ್ತು ವಾಹನದಲ್ಲಿ ಜಂಟಿ ಆಯುಕ್ತರ ಕಚೇರಿಯ ನಿಯಂತ್ರಣ ಕೊಠಡಿಯ ಸಿಬ್ಬಂದಿಗೆ ಒಪ್ಪಿಸಲಾಗಿದೆ.

ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತ ಶ್ರೀನಿವಾಸ್, ಕಾರ್ಯಪಾಲಕ ಅಭಿಯಂತರರು, ಆರೋಗ್ಯಾ ವೈದ್ಯಾಧಿಕಾರಿ, ಮಾರ್ಷಲ್ ಗಳ ಮೇಲ್ವಿಚಾರಕರು, ಮಾರ್ಷಲ್ ಗಳು ಉಪಸ್ಥಿತರಿದ್ದರು.