ಫ್ಲಾರೆನ್ಸ್ ನೈಟಿಂಗೇಲ್ ಮೂರ್ತಿ ಸ್ಥಾಪನೆಯಾಗಲಿ

ಬೀದರ್:ಮೇ.14: ರಾಜ್ಯದ ಎಲ್ಲ ಸರ್ಕಾರಿ ನಸಿರ್ಂಗ್ ಕಾಲೇಜುಗಳಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಮೂರ್ತಿ ಸ್ಥಾಪನೆಯಾಗಬೇಕು ಎಂದು ರಾಜ್ಯ ಶುಶ್ರೂಷಾ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ರಾಜಕುಮಾರ ಮಾಳಗೆ ಹೇಳಿದರು.
ಇಲ್ಲಿಯ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಇರುವ ಬ್ರಿಮ್ಸ್ ನಸಿರ್ಂಗ್ ಕಾಲೇಜಿನಲ್ಲಿ ನಡೆದ ವಿಶ್ವ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲೇ ಸದ್ಯ ಬೀದರನ ನಸಿರ್ಂಗ್ ಕಾಲೇಜಿನಲ್ಲಿ ಮಾತ್ರ ಫ್ಲಾರೆನ್ಸ್ ನೈಟಿಂಗೇಲ್ ಅವರ ಮೂರ್ತಿ ಇದೆ. ಫ್ಲಾರೆನ್ಸ್ ನೈಟಿಂಗೇಲ್ ಮಾನವೀಯ ಸೇವೆ ಇತರರಿಗೆ ಪ್ರೇರಣೆ ಆಗುವ ದಿಸೆಯಲ್ಲಿ ಎಲ್ಲ ಕಾಲೇಜುಗಳ ಆವರಣದಲ್ಲಿ ಅವರ ಮೂರ್ತಿ ಸ್ಥಾಪಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಉದ್ಘಾಟನೆ ನೆರವೇರಿಸಿದ ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಮಾತನಾಡಿ, ಶುಶ್ರೂಷಾ ಅಧಿಕಾರಿಗಳ ಸೇವೆ ಬಹಳ ಶ್ರೇಷ್ಠವಾಗಿದೆ. ಕೋವಿಡ್ ವೇಳೆ ಶುಶ್ರೂಷಾ ಅಧಿಕಾರಿಗಳು ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು. ಜನರ ಪ್ರಾಣ ರಕ್ಷಿಸಿದ್ದರು ಎಂದು ಸ್ಮರಿಸಿದರು.
ಫ್ಲಾರೆನ್ಸ್ ನೈಟಿಂಗೇಲ್ ತಮ್ಮ ಸೇವೆ ಮೂಲಕ ವಿಶ್ವದಲ್ಲಿ ಹೆಸರು ಮಾಡಿದ್ದರು. ಶುಶ್ರೂಷಾ ಅಧಿಕಾರಿಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ ನುಡಿದರು.
ಬ್ರಿಮ್ಸ್ ಆಸ್ಪತ್ರೆ ನಸಿರ್ಂಗ್ ಅಧೀಕ್ಷಕ ಶಿವಯೋಗಿ ಬಾಲಿ, ರಾಜ್ಯ ಶುಶ್ರೂಷಾ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಣಿಕಾ ಚಂದನ್, ಅಲೀಮ್, ಪ್ರಕಾಶ ಮಹಿಮಾಕರ್, ಸುಧಾಕರ ಮತ್ತಿತರರು ಇದ್ದರು.