ಫ್ರಾನ್ಸ್ ಹಿಂಸಾಚಾರ ೪೫ ಸಾವಿರ ಸಿಬ್ಬಂದಿ ನಿಯೋಜನೆ

ಪ್ಯಾರಿಸ್, ಜು.೧- ಪೊಲೀಸರ ಗುಂಡೇಟಿಗೆ ಯುವಕ ಮೃತಪಟ್ಟಿರುವುದನ್ನು ಖಂಡಿಸಿ ಫ್ರಾನ್ಸ್‌ನಲ್ಲಿ ಆರಂಭವಾದ ಹಿಂಸಾಚಾರ ಸದ್ಯಕ್ಕೆ ಅಂತ್ಯಗೊಳ್ಳುವ ಸೂಚನೆ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಘು ಶಸ್ತ್ರಸಜ್ಜಿತ ವಾಹನಗಳ ಬೆಂಬಲದೊಂದಿಗೆ ಫ್ರಾನ್ಸ್ ಇದೀಗ ೪೫,೦೦೦ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಇನ್ನು ದೇಶದಲ್ಲಿ ಹಿಂಸಾಚಾರ ಮುಂದುವರೆದಿರುವ ಹಿನ್ನೆಲೆಯಲ್ಲಿ ಬೆಲ್ಜಿಯಂ ಪ್ರವಾಸದಲ್ಲಿರುವ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಫ್ರಾನ್ಸ್‌ಗೆ ಹಿಂತಿರುಗಿದ್ದು, ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಬುಧವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ೪೯೨ ಬೃಹತ್ ಕಟ್ಟಡಗಳಿಗೆ ಹಾನಿಯಾಗಿದ್ದು ೨೦೦೦ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪೊಲೀಸರ ಗುಂಡೇಟಿಗೆ ಬಲಿಯಾದ, ಪ್ಯಾರಿಸ್‌ನ ಉಪನಗರದಲ್ಲಿ ವಾಸಿಸುತ್ತಿದ್ದ ೧೭ರ ಹರೆಯದ ಯುವಕ ನಾಹೆಲ್‌ನ ಅಂತ್ಯಸಂಸ್ಕಾರ ಶನಿವಾರ ನಡೆಯಲಿದ್ದು, ಹಿಂಸಾಚಾರ ಮತ್ತಷ್ಟು ಬುಗಿಲೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ೪೫ ಸಾವಿರಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅತ್ತ ಬೆಲ್ಜಿಯಂನ ಬ್ರಸ್ಸೆಲ್ಸ್‌ನಲ್ಲಿ ಯುರೋಪಿಯನ್ ಯೂನಿಯನ್ (ಇಯು) ಸಮ್ಮೇಳನದಲ್ಲಿ ಭಾಗಿಯಾಗಿದ್ದ ಮ್ಯಾಕ್ರನ್ ಅವರು ಇದೀಗ ಫ್ರಾನ್ಸ್‌ಗೆ ಮರಳಿದ್ದು, ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಪೊಲೀಸರ ಗುಂಡೇಟಿಗೆ ಯುವಕ ಬಲಿಯಾಗಿರುವುದನ್ನು ಖಂಡಿಸಿ ಫ್ರಾನ್ಸ್‌ನಲ್ಲಿ ಬುಧವಾರದಿಂದ ಮುಂದುವರಿದಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ನಿಯಂತ್ರಿಸಲು ಭದ್ರತಾ ಸಿಬಂದಿ ಹರಸಾಹಸ ಪಡುತ್ತಿದ್ದು ಇದುವರೆಗೆ ೬೬೭ಕ್ಕೂ ಅಧಿಕ ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ರಸ್ತೆ ತಡೆ ನಡೆಸಿದರಲ್ಲದೆ ಭದ್ರತಾ ಸಿಬಂದಿಯತ್ತ ಪಟಾಕಿಗಳನ್ನು ಎಸೆದರು. ಪ್ಯಾರಿಸ್ ನ ಹೊರವಲಯದಲ್ಲಿರುವ ೧೨ನೇ ಜಿಲ್ಲೆಯಲ್ಲಿನ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದರು. ಈ ಘರ್ಷಣೆಯಲ್ಲಿ ಕನಿಷ್ಟ ೨೫೦ ಭದ್ರತಾ ಸಿಬಂದಿ ಗಾಯಗೊಂಡಿದ್ದಾರೆ. ಕ್ಲಮರ್ಟ್, ನೆಯುಲಿ-ಸುರ್-ಮ್ಯಾರ್ನ್ ಮುಂತಾದ ನಗರಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪ್ಯಾರಿಸ್ ವಲಯದಲ್ಲಿ ಬಸ್ಸು ಹಾಗೂ ಟ್ರಾಮ್ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಯುವಕನ ಹತ್ಯೆ ಖಂಡಿಸಿ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲೂ ಪ್ರತಿಭಟನೆ ನಡೆದಿದೆ. ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರೂ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹಲವು ನಗರಗಳಲ್ಲಿ ಶಾಲೆಗಳು, ಅಂಗಡಿ ಮತ್ತು ಬ್ಯಾಂಕ್ಗಳಿಗೆ ಬೆಂಕಿಹಚ್ಚಲಾಗಿದೆ. ೬೬೭ಕ್ಕೂ ಅಧಿಕ ಜನರನ್ನು ಬಂಧಿಸಿದ್ದು ಬಂಧಿತರಲ್ಲಿ ಹೆಚ್ಚಿನವರು ೧೪ರಿಂದ ೧೮ ವರ್ಷದವರು. ಹೀಗಾಗಿ ಹಿಂಸಾಚಾರವನ್ನು ನಿಲ್ಲಿಸಲು ಪೊಲೀಸರು ಸಂಪೂರ್ಣ ವಿಫಲಗೊಂಡ ಹಿನ್ನೆಲೆಯಲ್ಲಿ ಇದೀಗ ಹೆಚ್ಚುವರಿ ೪೫ ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬಂದಿ ನಿಯೋಜಿಸಲಾಗಿದ್ದರೂ ದೇಶದ ಹಲವೆಡೆ ಹಿಂಸಾಚಾರ ಮುಂದುವರಿದಿದೆ. ಪ್ರತಿಭಟನಾಕಾರರು ಪುರಸಭೆಯ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಪೂರ್ವದ ಲಿಯಾನ್ ನಗರದಲ್ಲಿ ಟ್ರಾಮ್ (ರೈಲಿನ ರೀತಿಯ ಸಾರಿಗೆ ವ್ಯವಸ್ಥೆ) ಒಂದಕ್ಕೆ ಬೆಂಕಿ ಹಚ್ಚಲಾಗಿದೆ. ಕೇಂದ್ರ ಪ್ಯಾರಿಸ್‌ನ ರಿವೊಲಿ ರಸ್ತೆಯಲ್ಲಿನ ಕೆಲವು ಅಂಗಡಿಗಳನ್ನು ದೋಚಲಾಗಿದೆ.

ಏನಿದು ಘಟನೆ
ಮಂಗಳವಾರ ರಾತ್ರಿ ಪ್ಯಾರಿಸ್ ಹೊರವಲಯದ ನ್ಯಾಂಟೆರ್ ಎಂಬ ನಗರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಹೆಲ್ ಎಂಬ ಯುವಕ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಕಾರು ಚಲಾಯಿಸಲು ಮುಂದಾಗಿದ್ದಾನೆ. ಆಗ ಆತ್ಮರಕ್ಷಣೆಗೆ ಪೊಲೀಸರು ಹಾರಿಸಿದ ಗುಂಡೇಟಿನಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಆದರೆ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಚಾಲಕನ ಹಣೆಗೆ ಪೊಲೀಸ್ ಸಿಬಂದಿ ಪಿಸ್ತೂಲನ್ನು ಗುರಿಹಿಡಿದು ಪ್ರಶ್ನಿಸುತ್ತಿರುವುದು, ಅವರಿಂದ ತಪ್ಪಿಸಿಕೊಂಡು ಚಾಲಕ ಕಾರು ಚಲಾಯಿಸಿದಾಗ ಗುಂಡು ಹಾರಿದ ಸದ್ದು, ಕಾರು ಸ್ವಲ್ಪ ಎದುರು ಚಲಿಸಿ ರಸ್ತೆಪಕ್ಕ ಉರುಳಿ ಬೀಳುವುದು, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದೃಶ್ಯವಿದೆ. ಘಟನೆ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯ ನಾಗರಿಕರು ಬೀದಿಗಿಳಿದು ಪೊಲೀಸ್ ಸಿಬ್ಬಂದಿ ಜೊತೆ ಕಾದಾಟದಲ್ಲಿ ನಿರತರಾಗಿದ್ದು, ಹಿಂಸಾಚಾರ ಈಗಲೂ ಮುಂದುವರೆದಿದೆ.

ಬೀದಿಗಿಳಿಯದಂತೆ ಹೆತ್ತವರು
ಕ್ರಮ ಕೈಗೊಳ್ಳಲಿ: ಮ್ಯಾಕ್ರನ್

ಇದುವರೆಗೆ ಬಂಧಿಸಲ್ಪಟ್ಟಿರುವ ಸುಮಾರು ೮೭೫ ಜನರಲ್ಲಿ ಮೂರನೇ ಒಂದರಷ್ಟು ಯುವಜನರಾಗಿದ್ದು ತಮ್ಮ ಮಕ್ಕಳು ಬೀದಿಗಿಳಿಯದಂತೆ ಹೆತ್ತವರು ಕ್ರಮ ಕೈಗೊಳ್ಳಬೇಕು ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಆಗ್ರಹಿಸಿದ್ದಾರೆ. ಮಕ್ಕಳನ್ನು ಮನೆಯೊಳಗೆ ಇರಿಸಿಕೊಳ್ಳುವುದು ಹೆತ್ತವರ ಹೊಣೆಯಾಗಿದೆ. ಅದು ಸರಕಾರ ಕೆಲಸವಲ್ಲ. ಜತೆಗೆ ಸಾಮಾಜಿಕ ಮಾಧ್ಯಮಗಳು ಹಿಂಸೆಯ ದಳ್ಳುರಿಗೆ ತುಪ್ಪ ಸುರಿಯವು ಕಾರ್ಯ ಮಾಡಬಾರದು. ಸಾಮಾಜಿಕ ಮಾಧ್ಯಮ ವೇದಿಕೆಗಳು ಹಿಂಸಾಚಾರ ಉಲ್ಬಣಕ್ಕೆ ಪೂರಕವಾಗಬಾರದು ಎಂದು ಮ್ಯಾಕ್ರನ್ ತಿಳಿಸಿದ್ದಾರೆ.