ಫೋನ್ ಪೇ ಮೂಲಕ 50 ಸಾವಿರ ಲಂಚ; ಪಿಎಸ್ ಐ- ಪಿಸಿ ಲೋಕಾಯುಕ್ತ ಬಲೆಗೆ

ದಾವಣಗೆರೆ.ಏ.೨೩; ನಾಪತ್ತೆಯಾಗಿದ್ದ ಮಹಿಳೆ ಪತ್ತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು, ಫೋನ್ ಪೇ ಮೂಲಕ 50 ಸಾವಿರ ಲಂಚ ಪಡೆಯುವಾಗ ದಾವಣಗೆರೆ ಗ್ರಾಮಾಂತರ ಠಾಣೆಯ ಪಿಎಸ್‌ಐ, ಪಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್​ಐ ಶಿವನಗೌಡ ಹಾಗೂ ಪಿಸಿ ಲಿಂಗರಾಜ್ ನಾಯ್ಕ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ‌ಬಿದ್ದ ಪೊಲೀಸ್ ಆಧಿಕಾರಿಗಳಾಗಿದ್ದಾರೆ. ಮಹಿಳೆಯನ್ನು ಹುಡುಕಿಕೊಡಲು ಪಿಎಸ್​ಐ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಮಹಿಳೆ ಪತಿ ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ. ದಾವಣಗೆರೆ ಲೋಕಾಯುಕ್ತ ಎಸ್​ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ ಇನ್​ಸ್ಪೆಕ್ಟರ್​ಗಳಾದ ರಾಷ್ಟ್ರಪತಿ ಹಾಗೂ ಅಂಜನೇಯ ಅವರು‌ ದಾವಣಗೆರೆ ಗ್ರಾಮಾಂತರ ಠಾಣೆಯ ಪಿಎಸ್‌ಐ, ಪಿಸಿ ಬಂಧಿಸಿದ್ದಾರೆ.ಚಿತ್ರದುರ್ಗ ಮೂಲದ ರಂಗಸ್ವಾಮಿ ಎಂಬವರ ಪತ್ನಿ ನಾಪತ್ತೆಯಾಗಿದ್ದು, ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ‌ನಾಪತ್ತೆ ಪ್ರಕಣ ದಾಖಲಾಗಿದೆ. ಈ ನಡುವೆ ಆಕೆ ದಾವಣಗೆರೆಯಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದುಬಂದ ಹಿನ್ನೆಲೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

ಆದರೆ ಠಾಣಾ ಪಿಎಸ್​ಐ ಮತ್ತು ಶಿವನಗೌಡ ಹಾಗೂ ಪಿಸಿ ಲಿಂಗರಾಜ್ ನಾಯ್ಕ ಅವರು ತಮ್ಮ ಕರ್ತವ್ಯ ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ರಂಗಸ್ವಾಮಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ, ಫೋನ್ ಪೇ ಮೂಲಕ 50 ಸಾವಿರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇತ್ತ ಲೋಕಾಯುಕ್ತ ಪೊಲೀಸರು ಠಾಣೆಗೆ ದಾಳಿ ನಡೆಸಿ ಎಸ್​ಐ ಮತ್ತು ಪಿಸಿಯನ್ನು ಬಂಧಿಸಿದ್ದಾರೆ.