ಫೋಕ್ಸೋ ಪ್ರಕರಣ: ಮುರುಘಾಶ್ರೀಗೆ ಮತ್ತೆ ಜೈಲು

ಬೆಂಗಳೂರು,ಏ.೨೪:ಫೋಕ್ಸೋ ಪ್ರಕರಣದ ಆರೋಪಿಯಾಗಿರುವ ಚಿತ್ರದುರ್ಗ ಮುರುಘ ರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು ಸುಪ್ರೀಂಕೋರ್ಟ್ ಅಮಾನತಿನಲ್ಲಿಟ್ಟಿದೆ. ಇದರಿಂದಾಗಿ ಶ್ರೀಗಳು ಮತ್ತೆ ಜೈಲು ಸೇರಬೇಕಿದೆ.
ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯರ ಪರ ವಕೀಲೆ ಅಪರ್ಣಾ ಭಟ್ ವಾದ ಮಂಡಿಸಿ, ಸಂತ್ರಸ್ತರು ಅಪ್ರಾಪ್ತ ವಯಸ್ಕಳಾಗಿರುವುದರಿಂದ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ನ ಗಮನಕ್ಕೆ ತಂದರು. ನ್ಯಾಯಮೂರ್ತಿ ಪ್ರಶಾಂತ್‌ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ, ಪ್ರತಿವಾದಿ ನ್ಯಾಯಾಂಗ ಬಂಧನದಲ್ಲಿರುವಾಗಲೇ ಸಾಕ್ಷಿಗಳ ವಿಚಾರಣೆ ಸೂಕ್ತ ಎಂದು ಹೇಳಿದೆ. ಹಾಗೆಯೇ, ಐಪಿಸಿ, ಫೋಕ್ಸೋ ಮತ್ತು ಇತರ ಕಾನೂನುಗಳ ಅಡಿಯಲ್ಲಿ ವಿವಿಧ ಅಪರಾಧಗಳಿಗೆ ಪ್ರಕರಣದಲ್ಲಿ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂಬುದನ್ನು ಪೀಠವು ಗಮನಿಸಿತು.
ಮುರುಘಾ ಮಠದ ಆಡಳಿತ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರಿಗೆ ಜಾಮೀನು ಮಂಜೂರು ಮಾಡಿದ್ದ ಕರ್ನಾಟಕ ಹೈಕೋರ್ಟ್ ಕ್ರಮ ಪ್ರಶ್ನಿಸಿ ಮಾಜಿ ಶಾಸಕ ಏಕಾಂತಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಂನಾಥ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಆರ್ಡರ್ ಆರ್ಡರ್
ಈ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಮೂರ್ತಿ ಶರಣರು ಮುಂದಿನ ಒಂದು ವಾರದಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಗಿಸುವವರೆಗೂ ಶ್ರೀಗಳು ಬಂಧನದಲ್ಲಿರಬೇಕು ಎಂದು ಪೀಠ ತಿಳಿಸಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯ ಮುಂದಿನ ೪ ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಆರೋಪಿಯಾಗಿರುವ ಮುರುಘಾ ಶರಣರು ಅತ್ಯಂತ ಪ್ರಭಾವಿಯಾಗಿದ್ದಾರೆ. ಪ್ರಕರಣ ಸಂಬಂಧ ಆರೋಪಪಟ್ಟಿ ಸಲ್ಲಿಸಿದ್ದರೂ ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಲಿದ್ದಾರೆ. ಅಲ್ಲದೆ ಇದರಿಂದ ಪ್ರಕರಣದ ವಿಚಾರಣೆ ವೇಳೆ ಸತ್ಯಾಂಶಗಳು ಹೊರ ಬರದೇ ಇರಬಹುದು. ಆದ್ದರಿಂದ ಫೋಕ್ಸೋ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಪ್ರಸ್ತುತ ಮಂಜೂರಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.