ಫೈಬ್ರೋಸ್ಕ್ಯಾನ್ ಪರೀಕ್ಷಾ ಕೇಂದ್ರಕ್ಕೆ ಚಾಲನೆ

ತುಮಕೂರು, ಜು. ೨೯- ಸಿದ್ಧಗಂಗಾ ಆಸ್ಪತ್ರೆ ಜಿಲ್ಲೆಯ ಜನರಿಗೆ ಸೂಪರ್ ಸ್ಪೆಷಾಲಿಟಿ ಸೇವೆ ಒದಗಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯೋನ್ಮುಖವಾಗಿದ್ದು, ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಲಿವರ್ ಪರೀಕ್ಷೆಗಾಗಿಯೇ ನೂತನ ಫೈಬ್ರೋಸ್ಕ್ಯಾನ್ ಪರೀಕ್ಷೆ ಪರಿಚಯಿಸಲಾಗುತ್ತಿದೆ. ಲಿವರ್ ಅನಾರೋಗ್ಯದಿಂದ ಬಳಲುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಇಲ್ಲಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಫೈಬ್ರೋ ಸ್ಕ್ಯಾನ್ ಪರೀಕ್ಷಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಅಸಮರ್ಪಕ ಆಹಾರ ಪದ್ಧತಿ, ಅತಿಯಾದ ಬೊಜ್ಜು, ಮದ್ಯಪಾನ ಸೇರಿದಂತೆ ಇನ್ನಿತರ ಕಾರಣದಿಂದ ಮನುಷ್ಯನ ಲಿವರ್ ಹಾನಿಗೊಳಗಾಗುತ್ತಿದ್ದು ಫೈಬ್ರೋಸ್ಕಾನ್‌ನಂತಹ ಪರೀಕ್ಷೆಗಳು ಲಿವರ್‌ನ ಸಮಗ್ರ ಅರೋಗ್ಯವನ್ನು ಪತ್ತೆಹಚ್ಚಲು ನೆರವಾಗಲಿವೆ ಎಂದರು.
ಹೈಪಟೈಟಿಸ್ ಸ್ಪೆಷಲಿಸ್ಟ್ ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಈಶ್ವರ್ ಅಮಲಝರಿ ಮಾತನಾಡಿ, ಲಿವರ್‌ನ ಆರೋಗ್ಯ ಪರೀಕ್ಷೆಗಾಗಿ ಇದುವರೆಗೂ ನಾವು ರಕ್ತಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ಮಾಡಬೇಕಿತ್ತು. ಇದರಿಂದ ನಿಖರ ಹಾಗೂ ಸಂಪೂರ್ಣ ಫಲಿತಾಂಶ ಪಡೆಯುವುದು ಕಷ್ಟಕರವಾಗುತ್ತಿತ್ತು. ಈಗ ಪರಿಚಯಿಸುತ್ತಿರುವ ಫೈಬ್ರೋ ಸ್ಕ್ಯಾನ್ ಪರೀಕ್ಷೆಯಲ್ಲಿ ಲಿವರ್‌ನ ಎಲಾಸ್ಟಿಸಿಟಿ ಸೇರಿದಂತೆ ಲಿವರ್‌ನ ಸಮಸ್ಯೆಗಳ ನಿಖರ ಫಲಿತಾಂಶ ದೊರೆಯಲಿದ್ದು ನಿಖರ ಚಿಕಿತ್ಸೆಗೆ ಸಹಾಯಕವಾಗಲಿದೆ ಎಂದರು.
ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಹೃದ್ರೋಗ ತಜ್ಞ ಡಾ. ಭಾನುಪ್ರಕಾಶ್ ಮಾತನಾಡಿ, ಲಿವರ್ ಆರೋಗ್ಯದ ಬಗೆಗಿನ ಜನರ ನಿರ್ಲಕ್ಷ್ಯ ಹಾಗೂ ಪರೀಕ್ಷಾ ಕೇಂದ್ರಗಳ ಕೊರತೆಯಿಂದ ಜಿಲ್ಲೆಯ ಜನರು ಬೆಂಗಳೂರಿನಂತಹ ನಗರಗಳನ್ನೇ ಅವಲಂಬಿಸಬೇಕಿತ್ತು. ಆದರೆ, ನಮ್ಮ ಆಸ್ಪತ್ರೆಯಲ್ಲಿ ಪರಿಚಯಿಸುತ್ತಿರುವ ಇಂತಹ ವಿಶ್ವದರ್ಜೆಯ ಪರೀಕ್ಷಾ ಕೇಂದ್ರಗಳು ಬೆಂಗಳೂರಿನ ಅವಲಂಬನೆ ಕಡಿಮೆ ಮಾಡುವುದಲ್ಲದೆ ಲಿವರ್ ಸಮಸ್ಯೆ ಉಳ್ಳವರಿಗೆ ಹೊಸ ಆಶಾಕಿರಣವಾಗಿದೆ ಎಂದರು.