ಫೈನಲ್‌ಗೆ ಹಾರಿದ ಆಂಗ್ಲಪಡೆ:ಭಾರತಕ್ಕೆ ಹೀನಾಯ ಸೋಲು

ಅಡಿಲೇಡ್‌, ನ.೧೧- ಜೋಸ್‌ ಬಟ್ಲರ್‌ ಹಾಗೂ ಅಲೆಕ್ಸ್‌ ಹೇಲ್ಸ್‌ ಪ್ರದರ್ಶಿಸಿದ ಸಿಡಿಲಬ್ಬರದ ಅಜೇಯ, ದಾಖಲೆಯ ಆರಂಭಿಕ ಜೊತೆಯಾಟದ ನೆರವಿನಿಂದ ಇಲ್ಲಿ ಭಾರತ ವಿರುದ್ಧದ ಎರಡನೇ ಸೆಮಿಫೈನಲ್‌ ಪಂದ್ಯವನ್ನು ಇಂಗ್ಲೆಂಡ್‌ ೧೦ ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಅತ್ತ ಗೆಲುವಿನ ಮೂಲಕ ಆಂಗ್ಲಪಡೆ ವಿಶ್ವಕಪ್‌ ಫೈನಲ್‌ಗೇರಿದ್ದು, ನವೆಂಬರ್‌ ೧೩ರಂದು ಪ್ರಶಸ್ತಿಗಾಗಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲಿದೆ.
ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ ಭಾರತ ಕಳಪೆ ಆರಂಭವನ್ನೇ ಪಡೆಯಿತು. ಒಂದು ಹಂತದಲ್ಲಿ ಭಾರತ ೮.೫ ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ ಕೇವಲ ೫೬ ರನ್‌ ಗಳಿಸಿತ್ತು. ರಾಹುಲ್‌ (೫) ಹಾಗೂ ರೋಹಿತ್‌ ವಿಫಲತೆ ಕಂಡರು. ಅದರಲ್ಲೂ ರೋಹಿತ್‌ ೨೮ ಎಸೆತಗಳಲ್ಲಿ ಕೇವಲ ೨೭ ರನ್‌ ಗಳಿಸಿದ್ದು, ಪವರ್‌ಪ್ಲೇನಲ್ಲಿ ಭಾರತಕ್ಕೆ ತೀವ್ರ ತಂದಿತು. ಆದರೆ ಸೂರ್ಯಕುಮಾರ್‌ ವೇಗದ ಆಟಕ್ಕೆ ಒತ್ತು ನೀಡಿದರೂ ೧೪ ರನ್‌ ಗಳಿಸಿದ್ದ ವೇಳೆ ಔಟಾಗಿದ್ದು, ಆಂಗ್ಲಪಡೆಗೆ ಮುನ್ನಡೆ ತಂದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ ಹಾಗೂ ಪಾಂಡ್ಯ ಅಮೋಘ ಆಟ ತಂಡಕ್ಕೆ ಜೀವತುಂಬಿತು. ೩೯ ಎಸೆತಗಳಲ್ಲಿ ೫೦ ರನ್‌ ಗಳಿಸಿ ಕೊಹ್ಲಿ ಔಟಾಗಿ ನಿರ್ಗಮಿಸಿದರೆ ಪಾಂಡ್ಯ ತನ್ನ ಹೊಡಿಬಡಿ ಆಟ ಮುಂದುವರೆಸಿದ್ದು, ಮೊತ್ತ ೧೬೦ರ ಗಡಿ ದಾಟಲು ಸಾಧ್ಯವಾಯಿತು. ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಪಾಂಡ್ಯ ಔಟಾಗಿ ನಿರ್ಗಮಿಸಿದರು. ಅಂತಿಮವಾಗಿ ಭಾರತ ನಿಗದಿತ ೨೦ ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ ೧೬೮ ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಪಾಂಡ್ಯ ಕೇವಲ ೩೩ ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್‌ ನೆರವಿನಿಂದ ೬೩ ರನ್‌ ಗಳಿಸಿದರು. ಆಂಗ್ಲ ಪರ ಕ್ರಿಸ್‌ ಜೋರ್ಡನ್‌ ಮೂರು ವಿಕೆಟ್‌ ಪಡೆದರು.
ಇನ್ನು ಗುರಿ ಬೆನ್ನತ್ತಿದ ಆಂಗ್ಲ ಬ್ಯಾಟಿಂಗ್‌ನಲ್ಲಿ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು. ಭಾರತದ ಎಲ್ಲಾ ಬೌಲರ್ಸ್‌ಗಳ ವಿರುದ್ಧ ಆಂಗ್ಲ ಆರಂಭಿಕರಾದ ನಾಯಕ ಜೋಸ್‌ ಬಟ್ಲರ್‌ ಹಾಗೂ ಅಲೆಕ್ಸ್‌ ಹೇಲ್ಸ್‌ ಅಮೋಘ ಪ್ರದರ್ಶನ ನೀಡಿದರು. ಆರಂಭದಿಂದಲೂ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ಬೌಲರ್ಸ್‌ಗಳ ಬೆವರಿಳಿಸಿದರು. ಅಂತಿಮವಾಗಿ ಆಂಗ್ಲಪಡೆ ೧೬ ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ೧೭೦ ರನ್‌ ಗಳಿಸಿ ದಾಖಲೆಯ ಜಯ ಸಾಧಿಸಿತು. ಆಂಗ್ಲ ಪರ ಬಟ್ಲರ್‌ ಅಜೇಯ ೮೦ ರನ್‌ ಗಳಿಸಿದರೆ ಹೇಲ್ಸ್‌ ಕೇವಲ ೪೭ ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಏಳು ಸಿಕ್ಸರ್‌ ನೆರವಿನಿಂದ ಅಜೇಯ ೮೬ ರನ್‌ ಗಳಿಸಿದರು.