ಫೈಟರ್ ರವಿ ಸ್ವಾಗತ ವಿವರ ಕೇಳಿದ ಪ್ರಧಾನಿ ಕಚೇರಿ

ಬೆಂಗಳೂರು,ಮಾ.೧೪:ಮಂಡ್ಯದಲ್ಲಿ ಪ್ರಧಾನಿ ಮೋದಿ ಅವರನ್ನು ಫೈಟರ್ ರವಿ ಸ್ವಾಗತಿಸಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೆ ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ವರದಿ ನೀಡುವಂತೆ ರಾಜ್ಯ ಬಿಜೆಪಿಗೆ ಸೂಚಿಸಿದೆ.
ಫೈಟರ್ ರವಿಯನ್ನು ಪ್ರಧಾನಿಗಳ ಸ್ವಾಗತ ಪಟ್ಟಿಯಲ್ಲಿ ಯಾರು ಸೇರಿಸಿದರು. ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ಪ್ರಧಾನಿ ಕಚೇರಿ ರಾಜ್ಯ ಬಿಜೆಪಿಗೆ ಸಂದೇಶ ಕಳುಹಿಸಿದೆ. ಪ್ರಧಾನಿ ಕಚೇರಿಯ ಸೂಚನೆಯಂತೆ ಈ ಪಟ್ಟಿ ಸಿದ್ಧ ಮಾಡಿದವರು ಯಾರು ಎಂಬ ತಲಾಷ್‌ನ್ನು ಬಿಜೆಪಿ ನಾಯಕರು ನಡೆಸಿದ್ದು, ಮಂಡ್ಯ ಸ್ಥಳೀಯ ನಾಯಕರೇ ಈ ಪಟ್ಟಿ ಸಿದ್ಧಪಡಿಸಿದ್ದು, ಈ ಬಗ್ಗೆ ಎಲ್ಲ ವಿವರಗಳನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗುವುದು ಎಂದು ಬಿಜೆಪಿ ಮೂಲಗಳು ಹೇಳಿವೆ.
ಏನಿದು ವಿವಾದ?
ಪ್ರಧಾನಿ ಮೋದಿ ಅವರು ಮಂಡ್ಯಗೆ ದಶಪಥ ರಸ್ತೆ ಉದ್ಘಾಟನೆಗೆ ಭಾನುವಾರ ಆಗಮಿಸಿದ ಸಂದರ್ಭದಲ್ಲಿ ಹೆಲಿಪ್ಯಾಡ್‌ನಲ್ಲಿ ಗಣ್ಯರ ಜತೆ ರೌಡಿ ಶೀಟರ್ ರವಿ ಪ್ರಧಾನಿ ಅವರಿಗೆ ಸ್ವಾಗತ ಕೋರಿದ್ದು, ವಿವಾದಕ್ಕೆ ಕಾರಣವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈ ಬಗ್ಗೆ ಟೀಕೆ ಮಾಡಿದ್ದವು.ಪ್ರಧಾನಿ ಮೋದಿ ಅವರು ಕ್ರಿಕೆಟ್ ದಂಧೆ ನಡೆಸುವ ವ್ಯಕ್ತಿಗೆ ಕೈ ಮುಗಿದಿರುವುದು ಬಿಜೆಪಿಯ
ದೈನೇಸಿ ಸ್ಥಿತಿಯನ್ನು ತೋರಿಸುತ್ತದೆ ಎಂದು ಜೆಡಿಎಸ್‌ನ ಕುಮಾರಸ್ವಾಮಿ ಗೇಲಿ ಮಾಡಿದ್ದರು. ಹಾಗೆಯೇ ಕಾಂಗ್ರೆಸ್ ಪಕ್ಷ ಸಹ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಟ್ವೀಟ್ ಮಾಡಿತ್ತು. ಇದು ಸಾಕಷ್ಟು ಸುದ್ದಿಗೆ ಗ್ರಾಸವಾಗಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆಗೆ ಪ್ರಧಾನಿ ಸ್ವಾಗತಿಸುವವರ ಪಟ್ಟಿಯಲ್ಲಿ ಫೈಟರ್ ರವಿ ಹೆಸರು ಸೇರಿಸಿದ್ದು ತಪ್ಪು, ಈ ಬಗ್ಗೆ ಪರಿಶೀಲನೆ ನಡೆಸಲಿದೆ. ಫೈಟರ್ ರವಿ ಯಾರು ಎಂಬುದು ಪ್ರಧಾನಿಯವರಿಗೆ ಗೊತ್ತಿರಲಿಲ್ಲ. ಈ ತಪ್ಪಿಗೆ ಪ್ರಧಾನಿ ಜವಾಬ್ದಾರರಲ್ಲ ಎಂದು ಹೇಳಿದ್ದರು.