ಫೈಜರ್, ಬಯೋನ್‌ಟೆಕ್ ವಿತರಣೆಗೆ ಅನುಮತಿ

ಜಿನೇವಾ,ಜ.೧- ಕೊರೊನಾ ಸೋಂಕಿಗೆ ಫೈಜರ್ ಮತ್ತು ಬಯೋನ್‌ಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ವಿಶ್ವದಾದ್ಯಂತ ತ್ವರಿತ ವಿತರಣೆ ಮತ್ತು ಆಮದಿಗೆ ಅನುಕೂಲವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಅನುಮತಿ ನೀಡಿದೆ .
ಲಸಿಕೆಯನ್ನು ವಿತರಣೆ ಮತ್ತು ಆಮದು ಮಾಡುವ ಸಂಬಂಧ ಮೌಲ್ಯಮಾಪನ ಮಾಡಿ ಈ ಅನುಮೋದನೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ನಿರ್ಧಾರದಿಂದಾಗಿ ಜಗತ್ತಿನ ವಿವಿಧ ದೇಶಗಳಿಗೆ ಲಸಿಕೆಯನ್ನು ಪೂರೈಕೆ ಮಾಡಲು ಸಹಕಾರಿಯಾಗಲಿದೆ
ಡಿಸೆಂಬರ್ ೮ ರಂದು ಅಮೆರಿಕ ಮತ್ತು ಜರ್ಮನ್ ಲಸಿಕಾ ತಯಾರಿಕಾ ಕಂಪನಿ ಅಭಿವೃದ್ಧಿ ಪಡಿಸಿರುವ ಲಸಿಕೆ ಬಳಕೆಗೆ ತುರ್ತು ಅನುಮತಿ ನೀಡಲಾಗಿತ್ತು. ಆ ಬಳಿಕ ಕೆರಳ ಯುರೋಪಿಯನ್ ಒಕ್ಕೂಟ ಸೇರಿದಂತೆ ಅನೇಕ ದೇಶಗಳು ಇದನ್ನು ಅನುಸರಿಸಿದ್ದವು.
ಕೊರೊನೊ ಸೋಂಕಿಗೆ ಲಸಿಕೆ ಅಭಿವೃದ್ಧಿಪಡಿಸಿದ ನಂತರ ಇದೇ ಮೊದಲ ಬಾರಿ ಲಸಿಕೆಯನ್ನು ಮೌಲ್ಯಮಾಪನ ಮಾಡಿ ತುರ್ತು ಅನುಮತಿ ನೀಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ವಿಶ್ವದಾದ್ಯಂತ ಲಸಿಕೆಯ ಆಮದು ಮತ್ತು ಪೂರೈಕೆಗೆ ಅನುವು ಮಾಡಿಕೊಟ್ಟಿರುವುದರಿಂದ ಸೋಂಕು ವಿರುದ್ಧ ಹೋರಾಡಲು ಇದೊಂದು ಸಕಾರಾತ್ಮಕ ಹೆಜ್ಜೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಔಷಧಿ ಕಾರ್ಯಪಡೆಯ ಮುಖ್ಯಸ್ಥ ಮಾರಗಲೆ ಸಿಮಾವೋ ಹೇಳಿದ್ದಾರೆ.
ವಿಶ್ವದಾದ್ಯಂತ ಆದ್ಯತೆ ಮೇರೆಗೆ ವಿವಿಧ ದೇಶಗಳಿಗೆ ಲಸಿಕೆಯನ್ನು ಪೂರೈಕೆ ಮಾಡಲು ಈ ನಿರ್ಧಾರದಿಂದ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸೋಂಕಿನ ಲಸಿಕೆಯನ್ನು ತುರ್ತು ಮೌಲ್ಯಮಾಪನ ಮಾಡಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಲಸಿಕೆಗಾಗಿ ಎದುರುನೋಡುತ್ತಿದ್ದ ಅನೇಕ ದೇಶಗಳು ತಮ್ಮ ದೇಶದಲ್ಲಿ ಲಸಿಕೆ ಬಳಕೆಗೆ ಅವಕಾಶ ಮಾಡಿಕೊಡಲು ಸಹಕಾರಿಯಾಗಲಿದೆ.
ಫೈಜರ್ ಮತ್ತು ಬಯೋನ್‌ಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆ ಸುರಕ್ಷಿತ ಮತ್ತು ದಕ್ಷತೆ ಮತ್ತು ಗುಣಮಟ್ಟದಿಂದ ಕೂಡಿದೆ. ಈ ಬಗ್ಗೆ ಭಯ – ಆತಂಕ ಬೇಡ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಭರವಸೆ ನೀಡಿದೆ.