ಫೆ.8ರ ಸಾಹಿತ್ಯ ಸಮ್ಮೇಳನಕ್ಕೆ ಚಿದಾನಂದಗೌಡರಿಗೆ ಆಹ್ವಾನ

ಸಂಜೆವಾಣಿ ನ್ಯೂಸ್
ಮೈಸೂರು, ಜ.28: ಚಾಮರಾಜ ಕ್ಷೇತ್ರದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಮಂತ್ರಣ ನೀಡಲಾಯಿತು.
ಶಾಸಕ ಕೆ.ಹರೀಶ್ ಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ನಗರಾಧ್ಯಕ್ಷ ಕೆ.ಎಸ್.ಶಿವರಾಮ್, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಡಾ.ವೈ.ಡಿ. ರಾಜಣ್ಣ, ಉಪಾಧ್ಯಕ್ಷ ಟಿ.ತ್ಯಾಗರಾಜ್, ಸಂಘಟನಾ ಕಾರ್ಯದರ್ಶಿ ಮೈ.ನಾ. ಲೋಕೇಶ್, ಮುಖಂಡರಾದ ರವಿ ನಂದನ್, ಎಚ್.ಎಸ್.ಪ್ರಕಾಶ್, ರವಿಕುಮಾರ, ಮಹೇಶ್, ಲೋಕೇಶ್ ಕುಮಾರ್ ಹಾಗೂ ಮತ್ತಿತರರು ಚಿದಾನಂದ ಗೌಡ ಅವರಿಗೆ ಪುಷ್ಪಗುಚ್ಛವನ್ನು ನೀಡಿ ಸ್ವಾಗತಿಸಿದರು. ಫೆ.8 ರಂದು ಕಲಾಮಂದಿರದಲ್ಲಿ ಸಂಭ್ರಮದ ಸಮ್ಮೇಳನ ನಡೆಯಲಿದೆ.
ಇದೇ ವೇಳೆ ಸಮ್ಮೇಳಾನಾಧ್ಯಕ್ಷರಾಗಿ ಆಯ್ಕೆಗೊಂಡ ಚಿದಾನಂದ ಗೌಡ ಅವರು ಮಾತನಾಡಿ, ಬೇರೆ ಭಾಷೆಯವರ ಹಸ್ತಕ್ಷೇಪ, ಪ್ರಭಾವ ಹೆಚ್ಚಾಗಿರುವ ನಗರ ಪ್ರದೇಶದಲ್ಲಿ ಅದರಲ್ಲಿಯೂ ವಿಧಾನಸಭಾ ಕ್ಷೇತ್ರವಾರು ಸಮ್ಮೇಳನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇತ್ತೀಚೆಗಿನ ವಿದ್ಯಮಾನಗಳನ್ನು ಗಮನಿಸಿದಲ್ಲಿ ನಗರ ಪ್ರದೇಶದಲ್ಲಿ ಬೇರೆ ಭಾಷೆಗಳ ಪ್ರಭಾವ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಕನ್ನಡ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದರು.
ಕಸಾಪ ನಗರಾಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಇತ್ತೀಚೆಗೆ ಸರಕಾರ ಕನ್ನಡ ಅನುಷ್ಠಾನದ ಬಗ್ಗೆ ಕೈಗೊಂಡಿರುವ ಆಡಳಿತಾತ್ಮಕ ನಿರ್ಧಾರ ಶ್ಲಾಘನೀಯವಾಗಿದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾದರೆ ಸ್ಥಳೀಯರಲ್ಲಿ ಕನ್ನಡ ಜಾಗೃತಿ ಮೂಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ವಿಧಾನಸಭಾ ಕ್ಷೇತ್ರವಾರು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.