ಫೆ.7ರಂದು ಮಾತೆ ರಮಾಬಾಯಿ ಅಂಬೇಡ್ಕರ್ ಕೃತಿ ಬಿಡುಗಡೆ

ಕಲಬುರಗಿ,ಫೆ.5: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಬದುಕಿನುದ್ದಕ್ಕೂ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ ಅವರ ಪತ್ನಿ ರಮಾಬಾಯಿ ಅಂಬೇಡ್ಕರ್ ಅವರನ್ನು ಕುರಿತು ನ್ಯಾಯವಾದಿ ಅಶ್ವಿನಿ ಮದನಕರ್ ಅವರು ಬರೆದಿರುವ ‘ಮಾತೆ ರಮಾಬಾಯಿ ಅಂಬೇಡ್ಕರ್’ ಕೃತಿ ಬಿಡುಗಡೆ ಸಮಾರಂಭ ಇದೇ ಫೆ.7ರಂದು ಬೆಳಗ್ಗೆ 11ಕ್ಕೆ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜರುಗಲಿದೆ ಎಂದು ಅಶ್ವಿನಿ ಮದನಕರ್ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ 126ನೇ ಜಯಂತ್ಯುತ್ಸವ ಪ್ರಯುಕ್ತ ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆ, ಫುಲೆ ಸ್ಟಡಿ ಸರ್ಕಲ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಸುರೇಶ್ ಶರ್ಮ ಕೃತಿ ಲೋಕಾರ್ಪಣೆ ಮಾಡಲಿದ್ದು, ಖ್ಯಾತ ಸಾಹಿತಿ ಡಾ.ಎಚ್.ಎಸ್.ಅನುಪಮಾ ಅವರು ರಮಾಬಾಯಿ ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಲಿದ್ದಾರೆ. ಪ್ರಾಧ್ಯಾಪಕ ಡಾ.ಅರುಣ ಜೋಳದ ಕೂಡ್ಲಗಿ ಕೃತಿ ಪರಿಚಯ ಮಾಡಿಕೊಡಲಿದ್ದಾರೆ ಎಂದರು.
ಇನ್ನು ಜಯಂತ್ಯುತ್ಸವ ಪ್ರಯುಕ್ತ ಹಲವು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜ.18ರಿಂದ ಶಾಲಾ ಕಾಲೇಜು ಮತ್ತು ಹಾಸ್ಟೆಲ್ ಗಳಲ್ಲಿ ಅಭಿಯಾನ ಕೈಗೊಳ್ಳುತ್ತಾ ಬರಲಾಗುತ್ತಿದೆ. ಫೆ.4ರಂದು ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ ಕುರಿತು ಸ್ಪರ್ಧಾ ಪರೀಕ್ಷೆ, ಫೆ.5ರಂದು ಬೈಕ್ ರ್ಯಾಲಿ, ಫೆ.6ರಂದು ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಶ್ವಿನಿ ವಿವರಿಸಿದರು.
ದಿಲೀಪ್ ಕಾಯಂಕರ್, ಅಕ್ಷತಾ ನೆಲ್ಲೂರ್ ಹಾಗೂ ಸಾಬಮ್ಮ ಇದ್ದರು.