ಫೆ.6ರಿಂದ ಮೈಸೂರಲ್ಲಿ ಸುತ್ತೂರು ಜಾತ್ರೆ ಆರು ದಿನಗಳ ಕಾಲ ಹತ್ತಾರೂ ವಿಚಾರ, ಸಂಸ್ಕೃತಿ ವಿನಿಮಯಕ್ಕೆ ಸಜ್ಜು

ಸಂಜೆವಾಣಿ ನ್ಯೂಸ್
ಮೈಸೂರು: ಫೆ.04:- ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ, ಕಪಿಲಾ ನದಿ ತಟದ ಸುತ್ತೂರು ಕ್ಷೇತ್ರದಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಫೆ.6ರಿಂದ 11ರವರೆಗೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಾತ್ರಾ ಮಹೋತ್ಸವಕ್ಕೆ ರಾಜ್ಯ, ಹೊರರಾಜ್ಯದ ಲಕ್ಷಾಂತರ ಮಂದಿ ಆಗಮಿಸಲಿದ್ದು, ಸುತ್ತೂರು ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. 6ರಿಂದ 11ರವರೆಗೆ 6 ದಿನಗಳ ಕಾಲ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವೈಭವಯುತವಾಗಿ ನಡೆಯಲಿದ್ದು, ಹತ್ತಾರು ಕಾರ್ಯಕ್ರಮಗಳು ನಡೆಯಲಿವೆ. ಫೆ.7ರಂದು ಸಾಮೂಹಿಕ ವಿವಾಹ, ಹಾಲ್ಹರವಿ ಉತ್ಸವ, 8ರಂದು ರಥೋತ್ಸವ, 9ರಂದು ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷದೀಪೆÇೀತ್ಸವ, 10ರಂದು ತೆಪೆÇ್ಪೀತ್ಸವ, 11ರಂದು ಅನ್ನ ಬ್ರಹ್ಮೋತ್ಸವದ ಜತೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಎಸ್.ಪಿ.ಮಂಜುನಾಥಸ್ವಾಮಿ, ಜಾತ್ರೆ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು, ಗಣ್ಯರು, ವಿವಿಧ ಮಠಗಳ ಮಠಾಧೀಶರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ವರ್ಷ 30ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 750ಕ್ಕೂ ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗವಹಿಸಲಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ ಎಂದರು.
ಅತ್ಯಾಕರ್ಷಕ ವಸ್ತುಪ್ರದರ್ಶನ:
ಜಾತ್ರೆಯ ಪ್ರಮುಖ ಆಕರ್ಷಣೆಯಾದ ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಜೆಎಸ್‍ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳಿರುತ್ತವೆ. ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು.
ಸಾಮೂಹಿಕ ವಿವಾಹ :
ಫೆ.7ರಂದು ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಜಾತಿ-ಮತ ಭೇದವಿಲ್ಲದೆ ಸರ್ವಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅಂತರ್ಜಾತಿ, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧು-ವರರು ಸಹ ಪಾಲ್ಗೊಳ್ಳಲಿದ್ದಾರೆ.
ವಿವಾಹಗಳ ನೋಂದಣಿಯನ್ನು ಮಾಡಿಸಲಾಗುತ್ತದೆ. ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗೂ ಕಾಲುಂಗುರಗಳನ್ನು, ವರನಿಗೆ ಪಂಚೆ, ವಲ್ಲಿ, ಷರ್ಟ್‍ಗಳನ್ನು ನೀಡಲಾಗುತ್ತದೆ. ಸಾಮೂಹಿಕ ವಿವಾಹ ವ್ಯವಸ್ಥೆಯಲ್ಲಿ ಈವರೆಗೆ 3000ಕ್ಕೂ ಹೆಚ್ಚು ಮಂದಿ ಸತಿಪತಿಗಳಾಗಿದ್ದಾರೆ. ವಧು-ವರರು ವಿವಾಹದ ದೃಢೀಕರಣಪತ್ರ ಹಾಗೂ ನೋಂದಣಿಪತ್ರಗಳನ್ನು ಸಲ್ಲಿಸಿ. ಸರ್ಕಾರ ನೀಡುವ ಪೆÇ್ರೀತ್ಸಾಹಧನವನ್ನು ಪಡೆದುಕೊಳ್ಳಬಹುದಾಗಿದೆ.
ಚಿತ್ರಕಲೆ, ಗಾಳಿಪಟ ಸ್ಪರ್ಧೆ, ಚಿತ್ರಸಂತೆ:
1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇರೆ ಬೇರೆ ವಿಭಾಗಗಳಲ್ಲಿ, ಸ್ಥಳದಲ್ಲೇ ವಿವಿಧ ವಿಷಯಗಳ ಕುರಿತು ಚಿತ್ರ ರಚಿಸುವ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿದೆ. ರಾಜ್ಯ ಹಾಗೂ ಹೊರರಾಜ್ಯ ಕಲಾವಿದರುಗಳ ಕಲಾಕೃತಿಗಳ ಪ್ರದರ್ಶನ, ಮಾರಾಟ ಹಾಗೂ ಸ್ಥಳದಲ್ಲೇ ಸಾರ್ವಜನಿಕರ ಭಾವಚಿತ್ರ ರಚನೆಮಾಡಿ ಮಾರಾಟ ಮಾಡುವ ವ್ಯವಸ್ಥೆ ಜಾತ್ರೆಯ ಎಲ್ಲಾ ದಿನಗಳಲ್ಲಿಯೂ ಇರುತ್ತದೆ.
ಕುಸ್ತಿ ಪಂದ್ಯಾವಳಿ :
ಫೆ.9ರಂದು ರಾಷ್ಟ್ರಮಟ್ಟದ ನಾಡ ಕುಸ್ತಿ ಪಂದ್ಯಗಳು ನಡೆಯಲಿವೆ. ಈ ಬಾರಿ ಎರಡು ಮಾರ್ಪಿಟ್ ಕುಸ್ತಿಗಳಿರುತ್ತವೆ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ ಸುತ್ತೂರು ಕೇಸರಿ ಪ್ರಶಸ್ತಿ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆ ವಿಜೇತರಿಗೆ ಸುತ್ತೂರು ಕುಮಾರ ಪ್ರಶಸ್ತಿ ನೀಡಲಾಗುತ್ತದೆ.
ಕಟ್ಟಡ ಉದ್ಘಾಟನೆ :
ಫೆ.10ರಂದು ಸುತ್ತೂರಿನ ಮಠದ ಮುಂಭಾಗ ನೂತನವಾಗಿ ನಿರ್ಮಿಸಿರುವ ಪಾರ್ವತಮ್ಮ, ಶಾಮನೂರು ಶಿವಶಂಕರಪ್ಪ ಅತಿಥಿಗೃಹ ಉದ್ಘಾಟನೆಗೊಳ್ಳಲಿದೆ.
ಕ್ಯಾನ್ಸರ್ ತಪಾಸಣಾ ಶಿಬಿರ :
ಫೆ.6ರಿಂದ 10ರವರೆಗೆ 5 ದಿನಗಳ ಕಾಲ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಸಲಹೆ, ಸೂಚನೆ ಹಾಗೂ ವಿವಿಧ ರೀತಿಯ ಕ್ಯಾನ್ಸರ್‍ಗಳ ಬಗ್ಗೆ ಪರೀಕ್ಷೆಗಳನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದೆ.
ದೋಣಿ ವಿಹಾರ, ದೇಸಿ ಆಟ:
ಸಾರ್ವಜನಿಕರ ಮನೋರಂಜನೆಗಾಗಿ ಜಾತ್ರೆಯ ಎಲ್ಲ ದಿನಗಳಲ್ಲಿ ದೋಣಿ ವಿಹಾರ ಏರ್ಪಡಿಸಲಾಗಿದೆ. ಜತೆಗೆ ಪುರುಷರಿಗೆ ಫೆ.8ರಂದು, ಮಹಿಳೆಯರಿಗೆ 9ರಂದು, ಜೆಎಸ್‍ಎಸ್ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 7ರಿಂದ 10ರವರೆಗೆ. ದೇಸಿ ಆಟಗಳಾದ ಕೆಸರುಗದ್ದೆ ಓಟ, ಹಗ್ಗ-ಜಗ್ಗಾಟ, ಕುಂಟೆಬಿಲ್ಲೆ, ಅಳಿಗುಳಿಮನೆ, ಆಣೆಕಲ್ಲು, ಚದುರಂಗ, ಬುಗುರಿ, ಚೌಕಬಾರದ ಜತೆಗೆ 50 ಕೆಜಿ ಭಾರದ ಚೀಲ ಹೊತ್ತು ಓಡುವುದು, ಕಲ್ಲುಗುಂಡು ಎತ್ತುವುದು, ತುಂಬಿದ ಬಿಂದಿಗೆಯನ್ನು ತಲೆಯ ಮೇಲೆ ಹೊತ್ತು ಓಡುವ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಾದವರಿಗೆ ನಗದು ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿಪತ್ರ ನೀಡಲಾಗುತ್ತದೆ.
53ನೇ ದನಗಳ ಪರಿಷೆ:
ಪ್ರತಿ ವರ್ಷದಂತೆ ಈ ವರ್ಷವೂ ದನಗಳ ಜಾತ್ರೆ ಏರ್ಪಡಿಸಲಾಗಿದೆ. ರೈತರು ಎತ್ತು, ಹಸು, ಹೋರಿಗಳನ್ನು ಕೊಂಡುಕೊಳ್ಳಲು ಹಾಗೂ ಮಾರಾಟ ಮಾಡಲು ಅವಕಾಶವಿರುತ್ತದೆ. ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಉತ್ತಮ ರಾಸುಗಳಿಗೆ ಬಹುಮಾನ ನೀಡಿ ಪೆÇ್ರೀತ್ಸಾಹಿಸಲಾಗುತ್ತದೆ.
ಕಪಿಲಾರತಿ, ಸಾಂಸ್ಕೃತಿಕ ಮೇಳ:
ಫೆ.10ರ ತೆಪೆÇ್ಪೀತ್ಸವದಂದು ನಂಜನಗೂಡಿನ ಯುವ ಬ್ರಿಗೇಡ್ ಸಹಯೋಗದಲ್ಲಿ ಕಪಿಲಾರತಿ ಏರ್ಪಡಿಸಲಾಗಿದೆ. ಜೆಎಸ್‍ಎಸ್ ಅಂತರಸಂಸ್ಥೆಗಳ ಸಾಂಸ್ಕೃತಿಕ ಮೇಳದಲ್ಲಿ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಭರತನಾಟ್ಯ, ಸಾಮೂಹಿಕ ನೃತ್ಯ, ಶಾಸ್ತ್ರೀಯ ಸಂಗೀತ, ವಚನಾಧಾರಿತ ನೃತ್ಯ, ಸಾಮೂಹಿಕ ಗಾಯನ ಸ್ಪರ್ಧೆಗಳ ಮೂಲಕ ಸುಮಾರು 400ಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜಿಸಲಾಗಿದೆ. ಗದ್ದುಗೆಯ ಆವರಣದಲ್ಲಿ ನಗರಪ್ರದೇಶಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಗಾಯನ, ನೃತ್ಯ ಹಾಗೂ ನಾಟಕ ಪ್ರದರ್ಶನವಿರಲಿದೆ. ಜತೆಗೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳ ಕಲಾತಂಡಗಳು ಕಲಾಪ್ರದರ್ಶನ ನೀಡಲಿವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಉದಯಶಂಕರ್ ಇದ್ದರು.