ಫೆ. 25 ರಂದು ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿ ಪರೀಕ್ಷೆ:ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಲು ಸೂಚನೆ

ಕಲಬುರಗಿ:ಫೆ.15:ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಪೊಲೀಸ್ ಕಾನ್ಸ್‍ಟೇಬಲ್ (ಸಿವಿಲ್) (ಪುರುಷ ಮತ್ತು ಮಹಿಳಾ) (ತೃತೀಯ ಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಕ್‍ಲಾಗ್-1,137 ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಇದೇ ಫೆಬ್ರವರಿ 25 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ರಾಜ್ಯದಾದ್ಯಂತ ನಡೆಯಲಿದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಕಂಡಂತೆ ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಬೇಕೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಚೇತನ್ ಆರ್. ಅವರು ತಿಳಿಸಿದ್ದಾರೆ.
ಈ ಲಿಖಿತ ಪರೀಕ್ಷೆಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಕರೆ ಪತ್ರದ ಬಗ್ಗೆ ಮುಂಬರುವ ದಿನಗಳಲ್ಲಿ ಎಸ್.ಎಂ.ಎಸ್. ಮೂಲಕ ಮಾಹಿತಿಯನ್ನು ನೀಡಲಾಗುತ್ತದೆ. ಕರೆ ಪತ್ರದ ಲಿಂಕ್‍ನ್ನು ಸಹ ಕಳುಹಿಸಲಾಗುತ್ತದೆ. ಅಭ್ಯರ್ಥಿಗಳು ಕರೆಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು ನಿಗದಿಪಡಿಸಿದ ಮೇಲ್ಕಂಡ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗಬೇಕು.
ಪುರುಷ ಮತ್ತು ತೃತೀಯ ಲಿಂಗ ಪುರುಷ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಧ ತೋಳಿನ ಶರ್ಟ್‍ಗಳನ್ನು ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್‍ಗಳನ್ನು ಧರಿಸಬೇಕು. ಜಿಪ್ ಪ್ಯಾಕೆಟ್‍ಗಳು, ದೊಡ್ಡ ಬಟನ್‍ಗಳು ಇರುವ ಶರ್ಟ್‍ಗಳನ್ನು ಧರಿಸಬಾರದು. ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‍ಗಳನ್ನು ಧರಿಸಬಾರದು. ಪರೀಕ್ಷಾ ಕೇಂದ್ರದೊಳಗೆ ಶೂಗಳನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಬಾಗವಿರುವ ಪಾದರಕ್ಷೆಗಳನ್ನು (ಚಪ್ಪಲಿ) ಧರಿಸಬೇಕು. ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಳನ್ನು ಧರಿಸುವುದನ್ನು ನಿಷೇದಿಸಲಾಗಿದೆ.
ಮಹಿಳಾ ಮತ್ತು ತೃತಿಯಲಿಂಗ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‍ಗಳು ಅಥವಾ ಬಟನ್‍ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು / ಜೀನ್ಸ್ ಪ್ಯಾಂಟ್ ಧರಿಸಬಾರದು. ಇದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಅಭ್ಯರ್ಥಿಗಳು ಧರಿಸುವಂತೆ ನಿರ್ದೇಶಿಸಲಾಗಿದೆ.
ಎತ್ತರವಾದ ಹಿಮ್ಮಡಿಯ ಶೂಗಳನ್ನು / ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ / ಚಪ್ಪಲಿಗಳನ್ನಾಗಲಿ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ. ಮಹಿಳಾ ಮತ್ತು ತೃತಿಯಲಿಂಗ ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣ (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ) ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.