ಫೆ. 25ರಂದು ಕರಿಕಾಲ ಚೋಳ ನಾಟಕ ಪ್ರದರ್ಶನ

ಕಲಬುರಗಿ.ಫೆ.22: ನಗರದ ರಂಗಾಯಣದಲ್ಲಿ ಇದೇ ಫೆಬ್ರವರಿ 25ರಂದು ಸಂಜೆ 4-30ಕ್ಕೆ ಕರಿಕಾಲ ಚೋಳ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ನಾಟಕ ರಚನೆಕಾರ ಹಾಗೂ ಸಾಹಿತಿ ಮಹಾಂತೇಶ್ ನವಲಕರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಶರಣ ಮಾದಾರ ಚನ್ನಯ್ಯನವರ ಜೀವನ ಆಧಾರಿತ ಕಥೆಯನ್ನು ನಾಟಕ ಹೊಂದಿದೆ. ಸಂಘಟನೆಕಾರ ಲಿಂಗರಾಜ್ ತಾರಫೈಲ್ ಅವರ ಹುಟ್ಟುಹಬ್ಬದ ನಿಮಿತ್ಯ ರಂಗಾಯಣದ ವೇದಿಕೆಯ ವತಿಯಿಂದ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಶಿವಶರಣ ಮಾದಾರ ಚನ್ನಯ್ಯನವರು 12ನೇ ಶತಮಾನದಲ್ಲಿ ಬಸವಾದಿ ಶರಣರಲ್ಲಿ ಸೇರಿದವರು. ಅಸ್ಪøಶ್ಯತೆಯನ್ನು ನಿರ್ಮೂಲನೆಗೊಳಿಸಿ ಸಮಸಮಾಜ ನಿರ್ಮಾಣಕ್ಕೆ ಮುಂದಾದರು. ಅಂಥವರಿಗೆ ಕರಿಕಾಲ ಚೋಳನು ಹಲವಾರು ಶಾಸನಗಳನ್ನು ತನ್ನ ರಾಜ್ಯದಲ್ಲಿ ಬರೆಸಿ ಮಾದಾರ ಚೆನ್ನಯ್ಯನವರಿಗೆ ಅತ್ಯಂತ ಗೌರವದಿಂದ ಸನ್ಮಾನಿಸಿದರು. ಅಲ್ಲದೇ ಮಾದಾರ ಚೆನ್ನಯ್ಯನವರನ್ನು ಗುರುಗಳನ್ನಾಗಿ ಸ್ವೀಕರಿಸಿ, ಅವರ ಪಾದರಕ್ಷೆಗಳನ್ನು ತನ್ನ ಆಸ್ಥಾನದ ಸಿಂಹಾಸನದ ಮೇಲೆ ಇಟ್ಟು ಆಡಳಿತ ಮಾಡಿದ್ದ ಎಂದು ಅವರು ವಿವರಿಸಿದರು.
ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮಾದಿಗ ಸಮುದಾಯದ ಜಿಲ್ಲೆಯ ಎಲ್ಲ ತಾಲ್ಲೂಕಿನ ಹೋರಾಟಗಾರರು, ಅಧ್ಯಕ್ಷರು ಹಾಗೂ ಪದಾಧಿಕಾರಿಗಳೂ ಸೇರಿದಂತೆ ಸುಮಾರು 15000 ಜನರು ನಾಟಕ ವೀಕ್ಷಿಸುವ ಅಂದಾಜಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಿಗಂಬರ್ ತ್ರಿಮೂರ್ತಿ, ರವಿ ಎನ್. ಬೆಳಮಗಿ ಅವರು ಉಪಸ್ಥಿತರಿದ್ದರು.