ಫೆ.24 ಕ್ಕೆ ಇಂಡಿಯಲ್ಲಿ ಗಾಣಿಗ ಸಮಾಜದ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ : ಮಲ್ಲಿಕಾರ್ಜುನ ಲೋಣಿ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.19 : ಫೆಬ್ರುವರಿ 24 ರಂದು ಇಂಡಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಬಳಿ ಇರುವ ಗಾಣಿಗ ಸಮಾಜದ ಜಾಗದಲ್ಲಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸಭಾಭವನದ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಬೃಹತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ತಿಳಿಸಿದರು.
ನಗರದ ವನಶ್ರೀ ಮಠದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿಜಯಪುರ ಜಿಲ್ಲಾ ಗಾಣಿಗ ಸಂಘ ಹಾಗೂ ಇಂಡಿ ತಾಲ್ಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಗಾಣಿಗ ಸಮಾಜದ 2 ಎಕರೆ ಜಾಗದಲ್ಲಿ ನೂತನ ಸುಸಜ್ಜಿತ ಸಭಾಭವನ ನಿರ್ಮಿಸಲು ಇಂಡಿ ಮತಕ್ಷೇತ್ರದ ಜನಪ್ರಿಯ ಶಾಸಕ ಯಶವಂತರಾಯಗೌಡ ಪಾಟೀಲರು 5 ಕೋಟಿ ಅನುದಾನ ನೀಡಿದ್ದಾರೆ. ಅದರಲ್ಲಿ ಈಗಾಗಲೇ 2 ಕೋಟಿ ಹಣ ಮಂಜೂರು ಮಾಡಿ ಹಿಂದುಳಿದ ಗಾಣಿಗ ಸಮಾಜ ಗುರುತಿಸುವ ಕೆಲಸ ಮಾಡಿದ್ದಾರೆ ಎಂದರು.
ಗಾಣಿಗ ಸಮಾಜಕ್ಕೆ 2ಎ ಮೀಸಲಾತಿ ಇದ್ದರೂ ಸಮಾಜದ ಏಳ್ಗೆಗಾಗಿ ಯಾವುದೇ ಸರ್ಕಾರದಿಂದ ಸೂಕ್ತ ಅನುದಾನ, ಪ್ರಾತಿನಿಧ್ಯ ಸಿಕ್ಕಿಲ್ಲ. ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಹಾಸ್ಟೆಲ್ ವ್ಯವಸ್ಥೆ ಇಲ್ಲ. ರಾಜ್ಯದಲ್ಲೇ 60 ಲಕ್ಷದಷ್ಟು ಸಮಾಜದ ಜನಸಂಖ್ಯೆ ಇದ್ದರೂ ಯಾವುದೇ ತಾಲ್ಲೂಕಿನಲ್ಲಿ ಸಮುದಾಯ ಭವನಗಳಿಲ್ಲ. ರಾಜ್ಯದ ಇತಿಹಾಸದಲ್ಲಿ ಗಾಣಿಗ ಸಮಾಜ ಗುರುತಿಸಿ ಸಮಾಜದ
ಶ್ರೇಯೋಭಿವೃದ್ಧಿಗಾಗಿ 5 ಕೋಟಿ ಅನುದಾನ ನೀಡಿದ ಏಕೈಕ ಶಾಸಕರು ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲರು ಆಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕದಲ್ಲಿನ ಶಾಸಕರು ಹಿಂದುಳಿದ ಗಾಣಿಗ ಸಮಾಜದ ಏಳ್ಗೆಗಾಗಿ ಈ ರೀತಿಯ ಅನುದಾನ ನೀಡಬೇಕು ಎಂದು ಕೇಳಿಕೊಂಡರು.
ಜಿಲ್ಲಾ ಗಾಣಿಗ ಸಮಾಜದ ಬೃಹತ್ ಸಮಾವೇಶಕ್ಕೆ ಸುಮಾರು 15-20 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಗಾಣಿಗ ಸಮಾಜ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ ಮಾತನಾಡಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ನೂತನ ಸಭಾಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ, ಜವಳಿ, ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಸಮಾವೇಶದ ಉದ್ಘಾಟನೆ ನೆರವೇರಿಸಲಿದ್ದು, ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಗಾಣಿಗ ಗುರುಪೀಠದ ಡಾ. ಜಯಬಸವ ಕುಮಾರ ಜಗದ್ಗುರುಗಳು, ವನಶ್ರೀಮಠದ ಅಧ್ಯಕ್ಷ ಸಿದ್ದಮುತ್ಯಾ ಅವರು, ತಿಂಥಣಿಯ ಅಡವಿಲಿಂಗ ಮಹಾರಾಜರು, ಬೀದರಿನ ಸಿದ್ದಾರೂಢ ಆಶ್ರಮದ ಶಂಕರಾನಂದ ಮಹಾಸ್ವಾಮಿಗಳು, ಹಿರೇರೂಗಿ ಸುಗಲಮ್ಮ ತಾಯಿಯವರ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ರಮೇಶ ಜಿಗಜಿಣಗಿ, ಭೂಸೇನಾ ನಿಗಮದ ಅಧ್ಯಕ್ಷ, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ, ಚಿತ್ರದುರ್ಗ ನಗರ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ಗಾಣಿಗ ಸಮಾಜದ ರಾಜಕೀಯ ನಾಯಕರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಗಾಣಿಗ ಸಮಾಜ ಸಂಘದ ಉಪಾಧ್ಯಕ್ಷರುಗಳಾದ ಶರಣಪ್ಪ ಶ್ಯಾಪೇಟಿ, ಸಿ.ಎಸ್.ಬಿರಾದಾರ, ಅಮರೇಶ ಹೊಸಮನಿ, ಪ್ರಧಾನ ಕಾರ್ಯದರ್ಶಿ ಡಾ.ಬಾಬು ಸಜ್ಜನ, ಮಾಜಿ ಜಿಲ್ಲಾಧ್ಯಕ್ಷರುಗಳಾದ ಎಸ್.ಎಸ್.ಶಿರಾಡೋಣ, ಎನ್.ಎಸ್.ಲೋಣಿ, ಕೋಶಾಧ್ಯಕ್ಷ ಬಿ.ಕೆ.ಚೌಧರಿ, ಯುವ ಮುಖಂಡರಾದ ಶ್ರೀಶೈಲ ಹಳ್ಳಿ, ಸಚಿನ್ ಅಡಕಿ, ಮದನ ಲೋಣಿ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.