ಫೆ.19ರಂದು ಹೃದಯ ಆರೋಗ್ಯ ತಪಾಸಣಾ ಶಿಬಿರ ಯುನೈಟೆಡ್ ಆಸ್ಪತ್ರೆ 12ನೇ ವರ್ಷಾಚರಣೆ

ಕಲಬುರಗಿ:ಫೆ.17: ಇಲ್ಲಿನ ಯುನೈಟೆಡ್ ಆಸ್ಪತ್ರೆ ಆರಂಭಗೊಂಡು 12 ವರ್ಷ ಪೂರೈಸುತ್ತಿರುವ ಪ್ರಯುಕ್ತ ಇದೇ ಫೆ.19ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ವಿಕ್ರಮ್ ಸಿದ್ಧಾರೆಡ್ಡಿ ತಿಳಿಸಿದರು.
ಆಸ್ಪತ್ರೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯಕರ ಹೃದಯ ಶೀರ್ಷಿಕೆ ಅಡಿಯಲ್ಲಿ ಅಂದು ನಡೆಯಲಿರುವ ಉಚಿತ ತಪಾಸಣಾ ಶಿಬಿರದಲ್ಲಿ ಇ.ಸಿ.ಜಿ, ಸ್ಕ್ರೀನಿಂಗ್ ಎಕೋ ಸ್ಕ್ಯಾನ್, ಫಾಸ್ಟಿಂಗ್ ಶುಗರ್, ಲಿಪಿಡ್ ಪ್ರೊಫೈಲ್, ಎಚ್‍ಬಿಎ1ಸಿ, ಹೃದ್ರೋಗ ತಜ್ಞರ ಸಲಹೆ ಹಾಗೂ ಡಯಟ್ ಸಲಹೆ ಉಚಿತವಾಗಿ ಒದಗಿಸಲಾಗುವುದು ಎಂದರು.
ಅಂದಿನ ತಪಾಸಣಾ ಶಿಬಿರದಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳು ಇರುವುದು ಪತ್ತೆಯಾದರೆ ಉಚಿತವಾಗಿ ಕೊರೊನರಿ ಆ್ಯಂಜಿಯೋಗ್ರಾಮ್ ಸಹ ಕೈಗೊಳ್ಳಲಾಗುವುದು ಎಂದು ಸಹ ಡಾ.ವಿಕ್ರಮ್ ಸಿದ್ದಾರೆಡ್ಡಿ ಮಾಹಿತಿ ನೀಡಿದರು.
ಆಸ್ಪತ್ರೆಯ ಸಾಧನೆಗಳು:
ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಪ್ರಾಣ ಉಳಿಸಬೇಕೆಂಬ ಸದುದ್ದೇಶದಿಂದ ಟ್ರಾಮಾ ಕ್ರಿಟಿಕಲ್ ಕೇರ್ ಹಂತದಿಂದ ಆರಂಭಗೊಂಡ ಯುನೈಟೆಡ್ ಆಸ್ಪತ್ರೆ ಈಗ ವೈದ್ಯಕೀಯ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿ ಜನರಿಗೆ ಅತ್ಯುತ್ತಮ ಸೇವೆ ಒದಗಿಸುವ ಮೂಲಕ ಜನರ ವಿಶ್ವಾಸಾರ್ಹತೆಗೆ ಪಾತ್ರವಾಗಿದೆ. ದಿನದ 24 ತಾಸು ಚಿಕಿತ್ಸಾ ಸೌಲಭ್ಯ ಹೊಂದಿರುವ ಆಸ್ಪತ್ರೆಯಲ್ಲಿ ಈವರೆಗೆ 30 ಸಾವಿರ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಈ ಪೈಕಿ 2000 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ ಎಂದು ಡಾ.ರೆಡ್ಡಿ ವಿವರಿಸಿದರು.
ಹೃದ್ರೋಗ ಸಮಸ್ಯೆಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಆಸ್ಪತ್ರೆಯಲ್ಲಿ ಕ್ಯಾಥ್‍ಲ್ಯಾಬ್ ವಿಭಾಗ ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಖಾಸಗಿ ಆಸ್ಪತ್ರೆಗಳ ಪೈಕಿ ಇಂಥದ್ದೊಂದು ಅತ್ಯಾಧುನಿಕ ಕ್ಯಾಥ್‍ಲ್ಯಾಬ್ ಹೊಂದಿರುವ ಮೊದಲ ಆಸ್ಪತ್ರೆ ಎಂಬ ಶ್ರೇಯಸ್ಸು ತಮ್ಮ ಆಸ್ಪತ್ರೆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ದೊಡ್ಡ ಸಮೂಹವಿದ್ದು, ಈಗಾಗಲೇ ತೆರೆದ ಹೃದಯ ಶಸ್ತ್ರಚಿಕಿತ್ಸೆ ಆರಂಭಗೊಂಡಿದೆ. ಕಳೆದ ಮೂರು ತಿಂಗಳಲ್ಲಿ ಆರು ಯಶಸ್ವೀ ಹೃದಯ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ವಾಲ್ವ್ ರೀಪ್ಲೇಸ್‍ಮೆಂಟ್ ಒಳಗೊಂಡಂತೆ ಹೃದಯಕ್ಕೆ ಸಂಬಂಧಿಸಿದ 400 ಶಸ್ತ್ರಚಿಕಿತ್ಸೆಗಳನ್ನು ಕಳೆದ ಒಂದು ವರ್ಷದಲ್ಲಿ ನಡೆಸಲಾಗಿದೆ ಎಂದು ಡಾ.ವಿಕ್ರಮ್ ಸಿದ್ದಾರೆಡ್ಡಿ ಮಾಹಿತಿ ನೀಡಿದರು.
ಈ ಹಿಂದೆ ತೊಡೆ ಭಾಗದ ವಾಸ್ಕ್ಯುಲರ್ ಗಾಯಗಳಿಗೆ ಚಿಕಿತ್ಸೆ ನೀಡುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಈಗ ಯುನೈಟೆಡ್ ಆಸ್ಪತ್ರೆಯಲ್ಲಿ ಇದಕ್ಕೂ ಸೂಕ್ತ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಇದರ ಜೊತೆಗೆ, ರಕ್ತನಾಳದ ಶಸ್ತ್ರಚಿಕಿತ್ಸೆ ಸಹ ನಡೆಸಲಾಗುತ್ತಿದೆ. ಒಟ್ಟಾರೆ, ಯುನೈಟೆಡ್ ಆಸ್ಪತ್ರೆ ಈಗ ತೃತೀಯ ಹಂತದ ಆರೈಕೆಯಲ್ಲಿ (ಟೆರ್‍ಶಿಯರಿ ಕೇರ್) ಉತ್ತಮ ಹೆಸರು ಮಾಡಿದೆ ಎಂದು ನುಡಿದರು.

ಯುನೈಟೆಡ್ ಆಸ್ಪತ್ರೆಯ ನಿರ್ದೇಶಕಿ ಡಾ.ವೀಣಾ ವಿಕ್ರಮ್ ಸಿದ್ದಾರೆಡ್ಡಿ, ಡಾ.ರಾಜು ಕುಲಕರ್ಣಿ, ಡಾ.ಮೊಹ್ಮದ್ ಅಬ್ದುಲ್ ಬಷೀರ್, ಡಾ.ಉಡುಪಿ ಕೃಷ್ಣಾ, ಡಾ.ಅರುಣ ಹರಿದಾಸ್ ಸೇರಿದಂತೆ ಇತರರಿದ್ದರು.

ಫೆ.25,26ರಂದು ಸಿಪಿಆರ್, ಬಿಸಿಎಲ್‍ಎಸ್ ತರಬೇತಿ
ಹೃದಯಾಘಾತ ಸಂಭವಿಸಿದ ಕ್ಷಣದಲ್ಲಿ ಸಿಪಿಆರ್ (ಕಾರ್ಡಿಯೊ ಪಲ್ಮನರಿ ರಿಸಿಸಿಪಿಟಿಷನ್) ಕ್ರಮ ಅನುಸರಿಸುವ ಮೂಲಕ ಹೇಗೆ ವ್ಯಕ್ತಿಯೊಬ್ಬರ ಜೀವ ಉಳಿಸಬಹುದು ಎಂಬುದರ ಕುರಿತು 100 ನೊಂದಾಯಿತ ಆಸಕ್ತರಿಗೆ ಇದೇ ಫೆ.24ರಂದು ಯುನೈಟೆಡ್ ಆಸ್ಪತ್ರೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ.ವಿಕ್ರಮ್ ಸಿದ್ದಾರೆಡ್ಡಿ ಹೇಳಿದರು.
ಇದರ ಜೊತೆಗೆ, ಫೆ.25ರಂದು 30 ಆಸಕ್ತ ಶುಶ್ರೂಷಕರಿಗೆ (ನರ್ಸ್) ಬೇಸಿಕ್ ಕಾರ್ಡಿಯೊ ಲೈಫ್ ಸಪೋರ್ಟ್ (ಬಿಸಿಎಲ್‍ಎಸ್) ತರಬೇತಿ ನೀಡಲಾಗುತ್ತಿದೆ. ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞ ವೈದ್ಯರು ಈ ಉಭಯ ತರಬೇತಿ ನೀಡಲಿದ್ದು, ತರಬೇತಿ ಬಳಿಕ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಆಸಕ್ತರು ಯುನೈಟೆಡ್ ಆಸ್ಪತ್ರೆಯನ್ನು ಸಂಪರ್ಕಿಸುವ ಮೂಲಕ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಹೃದ್ರೋಗ ಸಮಸ್ಯೆಗೆ ಕ್ರಿಯಾಶೂನ್ಯತೆ ಕಾರಣ
ಈ ಹಿಂದೆ 50 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಕಂಡುಬರುತ್ತಿದ್ದ ಹೃದ್ರೋಗ ಸಮಸ್ಯೆಗಳು ಈಗೀಗ ತೀರಾ ಹದಿಹರೆಯದಲ್ಲಿ ಪತ್ತೆಯಾಗುತ್ತಿವೆ. ಕಲಬುರಗಿ ನಗರದಲ್ಲಿ ಇತ್ತೀಚೆಗೆ 22 ವರ್ಷದ ಯುವಕನಲ್ಲಿ ಗಂಭೀರ ಹೃದ್ರೋಗ ಸಮಸ್ಯೆ ಕಂಡುಬಂದಿದೆ. ಹೊರಗಿನ ಜಿಡ್ಡು ಪದಾರ್ಥಗಳ ಸೇವನೆ, ತಂಬಾಕು ಉತ್ಪನ್ನಗಳ ಬಳಕೆ, ಕೋವಿಡ್ ಕಾಲಘಟ್ಟದ ಬಳಿಕ ಹೆಚ್ಚಾಗಿ ಮೊಬೈಲ್‍ಗಳಲ್ಲೇ ಕಾಲಕಳೆಯುವ ಮೂಲಕ ಕ್ರಿಯಾಶೂನ್ಯ ಬದುಕಿಗೆ ಅಂಟಿಕೊಂಡಿರುವುದು ಯುವಕರಲ್ಲಿ ಹೃದಯಸಂಬಂಧಿ ಸಮಸ್ಯೆಗಳಿಗೆ ಪ್ರಮುಖ ಕಾರಣ ಎಂದು ಯುನೈಟೆಡ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ.ಬಸವಪ್ರಭು ಹೇಳಿದರು.
ಇನ್ನು, ಶೈಕ್ಷಣಿಕ ಹಂತದಲ್ಲಿ ಅತಿ ಹೆಚ್ಚು ಅಂಕ ಗಳಿಕೆ ಕುರಿತಂತೆ ಪೋಷಕರಿಂದ ಎದುರಾಗುವ ಒತ್ತಡದ ಕಾರಣಕ್ಕೂ ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಬೆಳಕಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಪೋಷಕರು ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.
ಯುನೈಟೆಡ್ ಆಸ್ಪತ್ರೆಯ ಕಾರ್ಡಿಯೊ ಥೊರಾಸಿಕ್ ಸರ್ಜರಿ ತಜ್ಞ ಡಾ.ಅರುಣ್‍ಕುಮಾರ್ ಹರಿದಾಸ ಮಾತನಾಡಿ, ಟ್ರಾಮಾ ಕೇರ್ ಚಿಕಿತ್ಸೆ, ಬೈಪಾಸ್ ಸರ್ಜರಿ, ಶ್ವಾಸಕೋಶದ ಕ್ಯಾನ್ಸರ್, ಅಪಘಾತದ ಸಂದರ್ಭದಲ್ಲಿ ಉಂಟಾಗುವ ರಕ್ತನಾಳಗಳ ಪಂಕ್ಚರ್ ಸರಿಪಡಿಸುವ ಶಸ್ತ್ರಚಿಕಿತ್ಸೆ ಹಾಗೂ ಧೂಮಪಾನದ ಕಾರಣಕ್ಕೆ ಹೃದಯದ ನಾಳಗಳಲ್ಲಿ ಉಂಟಾಗುವ ಬ್ಲಾಕೇಜ್ ಕ್ಲಿಯರೆನ್ಸ್ ಶಸ್ತ್ರಚಿಕಿತ್ಸೆಗಳನ್ನು ಸಹ ಯುನೈಟೆಡ್ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.