ಫೆ. 17ರಂದು ವಿಶ್ವ ಕನ್ನಡಿಗರ ಸಮ್ಮಿಲನ: ಸಂಗಾ ಅವರಿಗೆ ವಿಶೇಷ ಸನ್ಮಾನ ನಟ ಮುರಳಿ, ಮುಖ್ಯಮಂತ್ರಿ ಚಂದ್ರು ಮತ್ತಿತರರು ಭಾಗಿ

ಕಲಬುರಗಿ:ಫೆ.13: ನಗರದ ಶ್ರೀ ಶರಣಬಸವೇಶ್ವರ್ ಜಾತ್ರಾ ಮೈದಾನದಲ್ಲಿ ಫೆಬ್ರವರಿ 17ರಂದು ಸಂಜೆ 5 ಗಂಟೆಗೆ ಕರ್ನಾಟಕ ಸುವರ್ಣ ಮಹೋತ್ಸವದ ಪ್ರಯುಕ್ತ ವಿಶ್ವ ಕನ್ನಡಿಗರ ಸಮ್ಮಿಲನ ಹಮ್ಮಿಕೊಳ್ಳಲಾಗಿದೆ. ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ, ಒಕ್ಕಲಿಗರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಸಂಗಾ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು. ನಟರಾದ ಮುರಳಿ, ಮುಖ್ಯಮಂತ್ರಿ ಚಂದ್ರು ಮುಂತಾದವರು ಪಾಲ್ಗೊಳ್ಳುವರು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸಾರವಾಡ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಪುರಾತನ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಶ್ರೇಷ್ಠ ವಿದ್ವಾಂಸರು, ಚಿಂತಕರು ಮತ್ತು ಬರಹಗಾರ ವಿನೋಬಾ ಭಾವೆ ಅವರು ಕನ್ನಡ ಲಿಪಿಯನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆದಿದ್ದಾರೆ. ಕರ್ನಾಟಕ ರಾಜ್ಯವಲ್ಲದೇ ಜಗತ್ತಿನ ಅತ್ಯಂತ ಹೆಚ್ಚು ಜನ ಮಾತನಾಡುವ ಜಗತ್ತಿನ ಒಟ್ಟು ಭಾಷೆಗಳಲ್ಲಿ 29ನೇ ಸ್ಥಾನ ಪಡೆದಿರುವ ಭಾಷೆಯಾಗಿದೆ. ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಅಭಿಜಾತ ಭಾಷೆ ಎಂಬ ಗೌರವ ನೀಡಿ ಭಾರತದ ಭಾಷೆಗಳಲ್ಲಿ ಕನ್ನಡಕ್ಕೆ ನಾಲ್ಕನೇ ಗೌರವ ಸ್ಥಾನ ನೀಡಿದೆ. ಜಗತ್ತಿನಲ್ಲೇ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ 8 ಜ್ಞಾನ ಪೀಠಗಳನ್ನು ಪಡೆದಿರುವ ಹೆಮ್ಮೆಯ ಕನ್ನಡ ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಯಾಗಿದೆ ಎಂದರು.
ಕನ್ನಡ ಬಳಸುವ, ಮಾತನಾಡುವ ಜನ ಕರ್ನಾಟಕ ರಾಜ್ಯವಲ್ಲದೇ ಜಗತ್ತಿನ ಮೂಲೆ, ಮೂಲೆಗಳಲ್ಲಿ ಇದ್ದಾರೆ. ಕನ್ನಡ ಮತ್ತು ಕರ್ನಾಟಕದ ಕಂಪನ್ನು ದೇಶದ ಬೇರೆ, ಬೇರೆ ರಾಜ್ಯಗಳಲ್ಲದೇ ವಿವಿಧ ದೇಶಗಳಲ್ಲೂ ಪಸರಿಸಿರುವ ಹೆಮ್ಮೆಯ ಕನ್ನಡಿಗರಾಗಿದ್ದಾರೆ. ಕನ್ನಡಿಗರಷ್ಟೇ ಅಲ್ಲದೇ ತಮ್ಮ ಮಾತೃಭಾಷೆ ಯಾವುದೇ ಇದ್ದರೂ ಕನ್ನಡ, ಕನ್ನಡಿಗರಿಗಾಗಿ ದುಡಿಯುತ್ತಿರುವ ಬೇರೆ ಭಾಷಿಕರೂ ಇದ್ದಾರೆ. ಅಂಥವರನ್ನೆಲ್ಲ ಒಂದೇ ಸೂರಿನಡಿಯಲ್ಲಿ ಸೇರಿಸಿ ಕನ್ನಡದ ಅಭ್ಯುದಯಕ್ಕೆ ಶ್ರಮಿಸುವ ಕಾಯಕವೇ ವಿಶ್ವ ಕನ್ನಡಿಗರ ಸಮ್ಮಿಲನವಾಗಿದೆ ಎಂದು ಅವರು ಹೇಳಿದರು.
ಫೆಬ್ರವರಿ 17ರಂದು ಮಧ್ಯಾಹ್ನ 2-30ಕ್ಕೆ ನಮ್ಮ ರಾಜ್ಯ ಹಲವು ಪ್ರಾಂತ್ಯಗಳನ್ನು ಒಳಗೊಂಡಿದ್ದು, ಆ ಪ್ರಾಂತ್ಯಗಳಲ್ಲಿ ವಿವಿಧ ಜಿಲ್ಲೆಗಳಿಂದ ವೈವಿದ್ಯತೆಯನ್ನು ಸಾರುವ ಕಲಾ ತಂಡಗಳ ಸಮ್ಮಿಲನದೊಂದಿಗೆ ಭವ್ಯ ಮೆರವಣಿಗೆ ಜರುಗಲಿದೆ. ಮೆರವಣಿಗೆಯನ್ನು ಮಹಾಪೌರ ವಿಶಾಲ್ ದರ್ಗಿ ಅವರು ಉದ್ಘಾಟಿಸುವರು. ಭುವನೇಶ್ವರಿ ಭಾವಚಿತ್ರಕ್ಕೆ ಖ್ಯಾತ ಉದ್ಯಮಿ ಡಾ. ಬಿ. ಅಶೋಕ್ ಗುತ್ತೇದಾರ್ ಅವರು ಪುಷ್ಪಾರ್ಚನೆ ಮಾಡುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ. ಎಚ್.ಟಿ. ಪೋತೆ, ಬೆಂಗಳೂರಿನ ಉದ್ಯಮಿ ಅಣ್ಣಾರಾಯ್ ಎಸ್. ತಳವಾರ್ ಹಾಗರಗಿ ಅವರು ಆಹ್ವಾನಿತ ಅತಿಥಿಗಳಾಗಿ ಆಗಮಿಸುವರು ಎಂದು ಅವರು ತಿಳಿಸಿದರು.
ಸಂಜೆ 4-30ಕ್ಕೆ ಕನ್ನಡ, ಕನ್ನಡಿಗ, ಕರ್ನಾಟಕ ಕುರಿತು ಆತ್ಮಾವಲೋಕನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್. ಪಾಟೀಲ್ ಅವರು ಉದ್ಘಾಟಿಸುವರು. ನಾಲವಾರ್, ಕಾಖಂಡಕಿಯ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ದಾಕ್ಷಾಯಣಿ ಅಮ್ಮ ಅವರು ಗೌರವ ಉಪಸ್ಥಿತಿ ಇರುವರು. ಅಧ್ಯಕ್ಷತೆಯನ್ನು ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಡಾ. ಸುಭಾಷ್ ಭರಣಿ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮಪ್ರಕಾಶ್, ಮಾಜಿ ಸಿಂಡಿಕೇಟ್ ಸದಸ್ಯರಾದ ಸಮತಾ ಪಾಟೀಲ್, ಮುಖ್ಯ ಸಲಹೆಗಾರ ಪ್ರಕಾಶ್ ರೈ, ರಾಮಚಂದ್ರಯ್ಯ, ನಿಕೇತರಾಜ್ ಮೌರ್ಯ, ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಪುಣೆಯ ನಮ್ಮ ಹೊರನಾಡು ಕನ್ನಡಿಗರ ಸಂಘದ ಅಧ್ಯಕ್ಷ ಬಸಯ್ಯ ಹಿರೇಮಠ್, ಔರಂಗಾಬಾದ್‍ನ ಕನ್ನಡ ಸಂಘದ ಉಪಾಧ್ಯಕ್ಷ ಸುಭಾಷ್ ಜಿ. ಅಮಾಣೆ, ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ. ನಾರಾಯಣಸ್ವಾಮಿ, ತಮಿಳ್ನಾಡಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಸೆಲ್ವಿ, ಆಂಧ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಜನ್‍ಕುಮಾರ್, ಮಹಾರಾಷ್ಟ್ರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್ ಜೆಮಶೆಟ್ಟಿ, ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ್ ಅವರು ಆಗಮಿಸುವರು ಎಂದು ಅವರು ಹೇಳಿದರು.
ನಿವೃತ್ತ ಕುಲಪತಿ ಪ್ರೊ. ವಿ.ಟಿ. ಕಾಂಬಳೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಹಿರಿಯ ಹೋರಾಟಗಾರ ಲಕ್ಷ್ಮಣ್ ದಸ್ತಿ, ವಿಶೇಷ ಸಾರ್ವಜನಿಕ ಅಭಿಯೋಜಕ ಗೌರೀಶ್ ಕಾಶಂಪೂರ್, ಅಕ್ಕಲಕೋಟೆಯ ಮುಖ್ಯೋಪಾಧ್ಯಾಯ ಮಹಾಂತೇಶ್ವರ್ ಎಚ್. ಕಟ್ಟಿಮನಿ, ಖ್ಯಾತ ಉದ್ಯಮಿ ಡಾ. ಎಸ್.ಪಿ. ದಯಾನಂದ್, ಖ್ಯಾತ ಆಯುರ್ವೇದ ತಜ್ಞ ಯೋಗಶ್ರೀ ಚನ್ನಬಸವಣ್ಣ ಅವರಿಗೆ ಸೇವಾರತ್ನ ಪ್ರಶಸ್ತಿ ಹಾಗೂ ಜಯ ಕರ್ನಾಟಕ ಸಕ್ರಿಯ ಪದಾಧಿಕಾರಿಗಳಿಗೆ ಮತ್ತು ಕಾರ್ಯಕರ್ತರಿಗೆ ಜಯ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ಹವಾ ಮಲ್ಲಿನಾಥ್ ಮಹಾರಾಜರು, ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರು ವಹಿಸುವರು. ಮುಖ್ಯ ಅತಿಥಿಗಳಾಘಿ ಶಾಸಕರಾದ ಶ್ರೀಮತಿ ಕನೀಜ್ ಫಾತಿಮಾ, ಅಲ್ಲಮಪ್ರಭು ಪಾಟೀಲ್, ಎಂ.ವೈ. ಪಾಟೀಲ್, ಡಾ. ಅಜಯಸಿಂಗ್, ಬಸವರಾಜ್ ಮತ್ತಿಮೂಡ್, ಮಾಜಿ ಶಾಸಕ ಅಶೋಕ್ ಖೇಣಿ, ಗಣ್ಯರಾದ ರಾಧಾಕೃಷ್ಣ ದೊಡ್ಡಮನಿ, ನಿತಿನ್ ಗುತ್ತೇದಾರ್, ದತ್ತಾತ್ರೇಯ್ ಪಾಟೀಲ್ ರೇವೂರ್, ಡಾ. ಪ್ರಸನ್ನ, ದಯಾನಂದ್ ಪಾಟೀಲ್, ಆರ್.ಕೆ. ಪಾಟೀಲ್, ಚಂದ್ರಕಾಂತ್ ಪಾಟೀಲ್, ಅಂಬರೀಷ್ ಮುಂತಾದವರು ಆಗಮಿಸುವರು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ, ಒಕ್ಕಲಿಗರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಸಂಗಾ ಅವರಿಗೆ ವಿಶೇಷ ಸನ್ಮಾನ ಮಾಡಲಾಗುವುದು. ಖ್ಯಾತ ಚಲನಚಿತ್ರ ನಾಯಕ ನಟ ರೋರಿಂಗ್ ಸ್ಟಾರ್ ಮುರಳಿ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಬೆಂಗಳೂರಿನ ಕನ್ನಡಪರ ಹೋರಾಟಗಾರ ಕನ್ನಡ ಸೇನಾನಿ ಕನ್ನಡ ಕೃಷ್ಣ ಅವರಿಗೆ ಸನ್ಮಾನಿಸಲಾಗುವುದು. ಸಂಜೆ 6-30ಕ್ಕೆ ಸ್ಯಾಂಡಲ್‍ವುಡ್ ಸಂಗೀತ ಸಂಜೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.