ಫೆ.16 ತ್ರಿಪುರಾ, ನಾಗಾಲ್ಯಾಂಡ್ , ಮೇಘಾಲಯದಲ್ಲಿ ಫೆ.27ರಂದು ವಿಧಾನಸಭೆಗೆ ಚುನಾವಣೆ

ನವದೆಹಲಿ, ಜ.18- ತ್ರಿಪುರಾ, ನಾಗಲ್ಯಾಂಡ್ ಹಾಗೂ ಮೇಘಾಲಯ ರಾಜ್ಯಗಳ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಇಂದು ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಫೆ.16 ರಂದು ತ್ರಿಪುರಾ, ಫೆ.27 ನಾಗಲ್ಯಾಂಡ್ ಹಾಗೂ ಮೇಘಾಲಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಾ.2ರಂದು ಮೂರು ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಸವಣಾ ಆಯುಕ್ತ ರಾಜೇಂದ್ರ ಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ನಾಗಾಲ್ಯಾಂಡ್,ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ವಿಧಾನಸಭೆಗಳ ಐದು ವರ್ಷಗಳ ಅವಧಿಯು ಕ್ರಮವಾಗಿ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22ರಂದು ಕೊನೆಗೊಳ್ಳಲಿದೆ.
ಇದಕ್ಕೂ ಮುನ್ನ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಚುನಾವಣಾ ಆಯೋಗದ ತಂಡವು ರಾಜ್ಯಗಳಿಗೆ ಭೇಟಿ ನೀಡಿತ್ತು. ಭದ್ರತಾ ವ್ಯವಸ್ಥೆಗಳ ಪರಿಶೀಲನೆಯ ಜೊತೆಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸಿತು.
ತ್ರಿಪುರಾದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರವಿದ್ದು, ನಾಗಾಲ್ಯಾಂಡ್‌ನಲ್ಲಿ ನ್ಯಾಶನಲ್ ಡೆಮಾಕ್ರಟಿಕ್ ಪ್ರೊಗ್ರೆಸ್ಸೀವ್ ಪಾರ್ಟಿ (ಎನ್‌ಡಿಪಿಪಿ) ಆಡಳಿತದಲ್ಲಿದೆ. ಮೇಘಾಲಯದಲ್ಲಿ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಧಿಕಾರದಲ್ಲಿದೆ.