ಫೆ.13ಕ್ಕೆ ಸಂಪೂರ್ಣ ಸಾಲಮನ್ನಾಗೆ ಆಗ್ರಹಿಸಿ ದೇಶದೆಲ್ಲೆಡೆ ರ್ಯಾಲಿ

ಸಂಜೆವಾಣಿ ನ್ಯೂಸ್
ಮೈಸೂರು: ಜ.12:- ದೇಶದ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ದೆಹಲಿಯಲ್ಲಿ ಫೆ.13ರಂದು ದೇಶದ ಎಲ್ಲಾ ರೈತ ಸಂಘಟನೆಗಳ ಮಹಾ ಸಂಗಮ ರ್ಯಾಲಿ ನಡೆಯಲಿದೆ ದಕ್ಷಿಣ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ,ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.
ಈಗಾಗಲೇ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶದ ವಿವಿಧ ರಾಜ್ಯಗಳಲ್ಲಿ 14 ಕಿಸಾನ್ ಮಹಾ ಪಂಚಾಯತ್ ಸಮಾವೇಶಗಳ ನಡೆಸಿ ರೈತರ ಜಾಗೃತಿ ಪಡಿಸಲಾಗಿದೆ ಎಂದು ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶದ ರೈತರನ್ನು ರಕ್ಷಣೆ ಮಾಡಲು ಕೇಂದ್ರ ಸರಕಾರ ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರಗೆ ಬರಬೇಕು.ಕಬ್ಬಿನ ಎಫ್ ಆರ್ ಪಿ ದರವನ್ನು ಕನಿಷ್ಠ 4000 ರೂ.,ಗಳಿಗೆ ಏರಿಕೆ ಮಾಡಬೇಕು.60 ವರ್ಷ ತುಂಬಿದ ರೈತರಿಗೆ ಕನಿಷ್ಠ 10,000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು.ಬೆಳೆ ವಿಮೆ ಪದ್ಧತಿ ಬದಲಾಯಿಸಬೇಕು, ಎಲ್ಲಾ ಬೆಳೆಗಳಿಗೂ ಬೆಳೆವಿಮೆ ಜಾರಿ ಆಗಬೇಕು ಎಂಬ ಒತ್ತಾಯಗಳನ್ನು ಮಾಡಲಾಗುವುದು ಎಂದರು.
ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ರಹದಾರಿ ನಿಯಮಗಳನ್ನು ಉಲ್ಲಂಘಿಸಿ, ಸರಕಾರಕ್ಕೆ ಹಾಗೂ ರೈತರಿಗೆ ಹಲವಾರು ವಿಧದಲ್ಲಿ ಸುಳ್ಳು ಮಾಹಿತಿ ವರದಿ ಸಲ್ಲಿಸಿ ವಂಚನೆ ಮಾಡುತ್ತಿದೆ. ರಾಜ್ಯ ಸರಕಾರ ಕೂಡಲೇ ದಕ್ಷ ಅಧಿಕಾರಿಗಳ ತಂಡ ರಚಿಸಿ, ತನಿಖೆ ನಡೆಸಿ ಸಕ್ಕರೆ ಕಾರ್ಖಾನೆಯನ್ನು ರಾಜ್ಯ ಸರಕಾರ ವಶಕ್ಕೆ ಪಡೆದು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಸಹಕಾರಿ ವ್ಯವಸ್ಥೆಯಲ್ಲಿರುವ ಎಪಿಎಂಸಿ, ಸಹಕಾರಿ ಬ್ಯಾಂಕುಗಳು, ಹಾಲು ಉತ್ಪಾದಕರ ಸಂಸ್ಥೆಗಳ ಕಾರ್ಯನಿರ್ವಾಹಣೆಯಲ್ಲಿ ಸರಕಾರದ ನಾಮನಿರ್ದೇಶನ ಪ್ರತಿನಿಧಿ ಗಳನ್ನು ನೇಮಕ ಮಾಡುವುದನ್ನು ಕೈ ಬಿಡಬೇಕು, ಸಂಸ್ಥೆಗಳು ದುರ್ಬಲವಾಗಲು ರಾಜಕೀಯ ಪ್ರವೇಶ ಕಾರಣವಾಗಿದೆ ಎಂಬುದನ್ನು ಸರಕಾರ ಅರಿತುಕೊಳ್ಳಬೇಕು ಎಂದರು.
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ, ಇಂದಿನ ಮಾಧ್ಯಮ ಹಾಗೂ ಪ್ರಜಾತಂತ್ರ ವ್ಯವಸ್ಥೆ, ಕುರಿತು ವಿಚಾರ ವಿಮರ್ಶ ಗೋಷ್ಠಿ ಜ.24 ರಂದು ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ನಡೆಯಲಿದೆ. ನಿವೃತ್ತ ನ್ಯಾಯಾಧೀಶರು, ಸಮಾಜ ಚಿಂತಕರು, ಮಾಧ್ಯಮ ಕ್ಷೇತ್ರದ ಚಿಂತಕರು ಗೋಷ್ಠಿಯಲ್ಲಿ ಭಾಗವಹಿಸಿ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅತ್ತಳ್ಳಿ ದೇವರಾಜ್, ಪಿ.ಸೂಮಶೇಖರ್, ಬರಡನಪುರ ನಾಗರಾಜ್, ಕಿರಗಸೂರ ಶಂಕರ,ರಂಗರಾಜು, ಮಾರ್ಬಳ್ಳಿ ನೀಲಕಂಠಪ್ಪ, ಬಸವರಾಜು, ಗೌರಿಶಂಕರ್, ವೆಂಕಟೇಶ ನಾಗೇಶ ,ಪಟೇಲ್ ಶಿವಮೂರ್ತಿ,ರೇವಣ್ಣ,ಶಿವಣ್ಣ ಇದ್ದರು.