ಫೆ.೪ ಕ್ಕೆ ಹರಿಹರದಲ್ಲಿ ಪಂಚ ಮಹಾಯಜ್ಞ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೧: ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ವತಿಯಿಂದ ಹರಿಹರ ಎಸ್ ಜೆಯುಪಿ ಪಾಲಿಟೆಕ್ನಿಕ್. ಕಾಲೇಜು ಮೈದಾನದಲ್ಲಿ ಫೆ.4 ರಂದು ಬೆಳಿಗ್ಗೆ  5.30ರಿಂದ ಪಂಚಮಹಾ ಯಜ್ಞವನ್ನು ಶ್ರೀಶೈಲ ಜಗದ್ಗುರು ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಾಂತ ಅಧ್ಯಕ್ಷರಾದ ಮಹಾಮಂಡಲೇಶ್ವರ ಓಂ ಶ್ರೀ ವಿದ್ಯಾನಂದ ಸರಸ್ವತಿ ಗುರೂಜಿ ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಕಲ್ಯಾಣಕ್ಕಾಗಿ ಲೋಕಕಲ್ಯಾಣಾರ್ಥ ಹಾಗೂ ಸನಾತನ ಹಿಂದೂ ಧರ್ಮವನ್ನು ಸಂರಕ್ಷಿಸುವ, ಒಗ್ಗೂಡಿಸುವ ನಿಟ್ಟಿನಲ್ಲಿ ಗಣಹೋಮ, ಮಹಾರುದ್ರ ಹೋಮ, ಮಹಾಚಂಡಿಕಾ ಹೋಮ, ಶ್ರೀ ರಾಮತಾರಕ ಹೋಮ ಹಾಗೂ ಶ್ರೀ ಚಕ್ರ ನವಾವರಣ ಹೋಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೋಮದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅವಕಾಶವಿದ್ದು, 500 ಹಾಗೂ 1000 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಹೋಮದ ನಂತರ ಪ್ರಸಾದ ವಿತರಣೆ ಹಾಗೂ ಅನ್ನದಾನವನ್ನು ಏರ್ಪಡಿಸಲಾಗಿದೆ ಎಂದರು.  ಹೋಮದ ನಂತರ ಧರ್ಮ ಸಭೆಯನ್ನು ನಡೆಸಲಾಗಿದ್ದು, ಸುಮಾರು 30 ಕ್ಕೂ ಹೆಚ್ಚು ಸಾಧುಸಂತರು ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಹರಿಹರೇಶ್ವರ ದೇವಸ್ಥಾನದ ಬಳಿಯಿಂದ ಧರ್ಮಸಭೆ ನಡೆಯುವ ಮೈದಾನದವರೆಗೆ ಪಾದಯಾತ್ರೆ ಮೂಲಕ ಸಾಧು ಸಂತರನ್ನು ಕರೆತರಲಾಗುವುದು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದ ಸಂಚಾಲಕರಾದ ಡಾ. ಆರ್.ಆರ್. ಖಮಿತ್ಕರ್ ಮಾತನಾಡಿ, ಈ ಮಹಾಯಜ್ಞವನ್ನು ಪ್ರಕೃತಿಯನ್ನು ಉಳಿಸಿಕೊಳ್ಳಲು ಮಾಡಲಾಗುತ್ತಿದ್ದು, ಇದರ ಮೂಲಕ ಮಾನವ ಕಲ್ಯಾಣವನ್ನು ಬಯಸುವುದಾಗಿದೆ. ಸುಮಾರು 2000 ಸಾವಿರ ದಂಪತಿಗಳು ಹೋಮಕ್ಕೆ ಕೂರುವ ಅಂದಾಜು ಇದೆ ಎಂದರು.ಸುದ್ದಿಗೋಷ್ಠಿಯಲ್ಲಿ,  ಹೊನ್ನಾಳಿ ಬಾಬಣ್ಣ, ಪ್ರಮೀಳಾ ನಲ್ಲೂರು, ವೀರೇಶ್ ಅಜ್ಜಣ್ಣ, ಪರಶುರಾಮ್ ಬದಿ, ಅಂಬುಜಾ ರಾಜೋಳಿ, ನಿರಂಜನ್, ಆರ್.ಎಲ್. ಯೋಗೇಶ್ ಉಪಸ್ಥಿತರಿದ್ದರು.