ಫೆ. ೨೬ ರಿಂದ ೫ ದಿನ ರಾಹುಲ್ ಯಾತ್ರೆಗೆ ವಿಶ್ರಾಂತಿ

ನವದೆಹಲಿ,ಫೆ.೨೧:ಕಾಂಗ್ರೆಸ್‌ನ ನಾಯಕ ರಾಹುಲ್‌ಗಾಂಧಿ ಈ ತಿಂಗಳ ೨೬ ರಿಂದ ಮಾ. ೧ರವರೆಗೆ ೫ ದಿನಗಳ ಕಾಲ ಭಾರತ್ ಜೋಡೊ ನ್ಯಾಯಯಾತ್ರೆಗೆ ವಿರಾಮ ನೀಡಲಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ೨ ವಿಶೇಷ ಉಪನ್ಯಾಸ ನೀಡಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಯಾತ್ರೆಗೆ ವಿರಾಮ ನೀಡಿದ್ದಾರೆ.
ಫೆ. ೨೨ ಮತ್ತು ೨೩ ವಿಶ್ರಾಂತಿ ದಿನಗಳಾಗಿದ್ದು, ಫೆ. ೨೪ ರಿಂದ ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಯಾತ್ರೆ ಪುನಾರಂಭಗೊಳ್ಳಲಿದೆ. ಸಂಬಾಲ್, ಅಲೀಘರ್, ಹತ್ರಾಸ್, ಆಗ್ರಾ ಜಿಲ್ಲೆಗಳಲ್ಲಿ ಭಾರತ್ ಜೋಡೊನ್ಯಾಯಯಾತ್ರೆ ಸಂಚರಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಿಳಿಸಿದ್ದಾರೆ.
ರಾಹುಲ್‌ಗಾಂಧಿ ಅವರ ಕಾರ್ಯಕ್ರಮಗಳು ಪೂರ್ಣಗೊಂಡ ಬಳಿಕ ಮಾ. ೨ ರಿಂದ ಯಾತ್ರೆ ಆರಂಭವಾಗಲಿದ್ದು, ಮಧ್ಯಪ್ರದೇಶದ ಗ್ವಾಲಿಯರ್, ಉಜ್ಜಯಿನಿ, ಶಜಾಪುರ ಜಿಲ್ಲೆಗಳಲ್ಲಿ ರ್‍ಯಾಲಿ ನಡೆಯಲಿದೆ.
ಉಜ್ಜಯಿನಿಯಲ್ಲಿ ನಡೆಯಲಿರುವ ರ್‍ಯಾಲಿ ಸಂದರ್ಭದಲ್ಲಿ ಮಹಾಕಾಳೇಶ್ವರ ದೇವಾಲಯಕ್ಕೆ ರಾಹುಲ್‌ಗಾಂಧಿ ಭೇಟಿ ನೀಡಲಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ.