ಫೆ.೨೦ ಸಂತ ಕವಿ ಸರ್ವಜ್ಞ ಜಯಂತಿ

ಸಂಜೆವಾಣಿ ವಾರ್ತೆ
ರಾಯಚೂರು,ಫೆ.೧೮- ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆಬ್ರವರಿ ೨೦ ರಂದು ತ್ರಿಪದಿ ಕವಿ ಸರ್ವಜ್ಞ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕುಂಬಾರ ಸಂಘದ ಗೌರವಾಧ್ಯಕ್ಷ ವೈ. ಸುರೇಂದ್ರಬಾಬು ಯರಮರಸ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಸರ್ವಜ್ಞ ಕವಿ ತ್ರಿಪದಿಗಳ ಮೂಲಕ ಪದ್ಯವನ್ನು ರಚನೆ ಮಾಡುವುದರ ಮೂಲಕ ತ್ರಿಪದಿ ಕವಿ ಎಂದು ಕರೆಯಲ್ಪಡುತ್ತಾರೆ. ಹಲವಾರು ಅಂಶಗಳ ಕುರಿತು ವಚನೆಗಳನ್ನು ರಚನೆ ಮಾಡಿದ ಒಬ್ಬ ಮೇಧಾವಿ ವಚನಕಾರನಾಗಿದ್ದಾನೆ. ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ಮೂಡನಂಬಿಕೆಗಳನ್ನು ಹಳೆಯ ಸಂಪ್ರದಾಯ ಮತ್ತು ಕಟ್ಟಾಚಾರ ಕುರಿತು ತನ್ನ ವಚನೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದರು. ೧೬ನೇ ಶತಮಾನ ಇವರ ಕಾಲವಾಗಿದ್ದು, ಧಾರವಾಡ ಜಿಲ್ಲೆಯ ಪ್ರಸ್ತುತ ಹಾವೇರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅಭಲೂರು ಎಂಬ ಗ್ರಾಮದಲ್ಲಿ ಮಾಳ ಮತ್ತು ಮಾಳಮ್ಮ ಎಂಬುವವರ ಮಗನಾಗಿ ಜನಿಸಿದನು.
ಬಾಲ್ಯದಿಂದಲೂ ಕಟಾಚಾರಗಳನ್ನು ಸಮಾಜದ ಹಳೆಯ ಸಂಪ್ರದಾಯಗಳನ್ನು ಕುರಿತು ತೀಕ್ಷಣವಾಗಿ ಮಾತನಾಡುತ್ತಿದ್ದರು. ತಾನು ಎಷ್ಟು ಬುದ್ದಿವಂತನಾಗಿದ್ದರೂ ಸಹ ಸರ್ವಜ್ಞ ಎಂಬುವನು ಗರ್ವದಿಂದಾದವನೇ ‘ಸರ್ವರ ಒಳಗೊಂಡು ನುಡಿಯ ಕಲಿತು ವಿದ್ಯಾಪರ್ವತ ಆದ ಎನ್ನುವ ಅವರ ವಚನವು ಅವರ ಸರಳತೆಯ ಪ್ರತೀಕವಾಗುತ್ತದೆ. ಇಂತಹ ಸರಳ ಸಜ್ಜನಿಕೆಯ ಮೇಧಾವಿ ಕವಿಯ ಜಯಂತಿಯನ್ನು ಸರ್ಕಾರದಿಂದ ೧೦ನೇ ವರ್ಷ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ೨೦೨೨-೨೩ನೇ ಸಾಲಿನಲ್ಲಿ ೧೦ನೇ ತರಗತಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ನಮ್ಮ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಗುವುದು. ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೂ ಮತ್ತು ವಾಡಿಕೆಗಳನ್ನು ಮಾಡುವ ಹಿರಿಯರಿಗೆ ಸನ್ಮಾನಿಸಲಾಗುತ್ತದೆ ಎಂದ ಅವರು , ಈ ಕಾರ್ಯಕ್ರಮಕ್ಕೆ ಎಲ್ಲಾ ಜನ ಪ್ರತಿನಿಧಿಗಳು, ವಿವಿಧ ಇಲಾಖೆಯ ಸರ್ಕಾರಿ ನೌಕರರು ನಮ್ಮ ಜಿಲ್ಲೆಯ ಕುಂಬಾರ ಸಮಾಜದ ಬಂಧುಗಳು ಭಾಗವಹಿಸುವುದರ ಮೂಲಕ ತ್ರಿಪದಿ ಕವಿ ಸರ್ವಜ್ಞ ಜಯಂತಿಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ. ಶಿವರಾಜ ಕುಂಬಾರ, ಶಿವರಾಜ ಮಾಡಗಿರಿ, ಬಸವರಾಜ, ತಿಮ್ಮಪ್ಪ, ನರಸಿಂಹಲು, ಭೀಮಣ್ಣ, ವೀರಭದ್ರಪ್ಪ, ಗೋವಿಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.