ಫೆ. ೧೭ ರಾಜ್ಯಾದ್ಯಂತ ಬಸವಣ್ಣರ ಭಾವಚಿತ್ರ ಅನಾವರಣ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಫೆ.೧೩:ಈ ತಿಂಗಳ ೧೭ ರಂದು ರಾಜ್ಯಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಸವಣ್ಣನವರ ಕಾರ್ಯಕ್ರಮಗಳಿಗೆ ಸರ್ಕಾರದಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲ್ಲೂಕು ಮಟ್ಟದಲ್ಲಿ ಶಾಸಕರಿಂದ ಬಸವಣ್ಣನವರ ಭಾವಚಿತ್ರ ಅನಾವರಣ ನೆರವೇರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವಿಶ್ವಗುರು ಬಸವಣ್ಣ,ಸಾಂಸ್ಕೃತಿಕ ನಾಯಕ ಎಂದು ಎಲ್ಲ ಸರ್ಕಾರಿ ಕಚೇರಿಗಳ ಭಾವಚಿತ್ರಗಳಲ್ಲಿ ನಮೂದಿಸಲಾಗುವುದು ಎಂದು ಹೇಳಿದರು. ನಮ್ಮ ದೇಶದಲ್ಲಿ ಬಸವಣ್ಣ, ಮಹಾತ್ಮಗಾಂಧೀಜಿ, ಅಂಬೇಡ್ಕರ್, ಬುದ್ಧ ಈ ೪ ಹೆಸರುಗಳು ಜಗತ್ತಿನಲ್ಲಿ ಮನೆ ಮಾತಾಗಿದೆ. ೨,೫೦೦ ವರ್ಷಗಳ ಹಿಂದೆ ಬಸವಣ್ಣನವರು ೧೨ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ದನಿ ಎತ್ತಿದ್ದರು. ಗಾಂಧೀಜಿಯವರು ೨೦ನೇ ಶತಮಾನದಲ್ಲಿ ಅಂಬೇಡ್ಕರ್ ಮತ್ತು ಬುದ್ಧ ಇವರೆಲ್ಲರು ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ,ಆರೋಗ್ಯಕರ ಸಾಮಾಜಿಕ ವ್ಯವಸ್ಥೆಗೆ ಶ್ರಮಿಸಿದ್ದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸ್ಥಾಪಿಸಿರುವ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆ ಅನಾವರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನೆರವೇರಿಸಿದರು. ಸಚಿವ ಶಿವರಾಜ್ ತಂಗಡಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್,ಗೋವಿಂದರಾಜು ಮತ್ತಿತರರು ಇದ್ದಾರೆ.
ಸಮಾಜದಲ್ಲಿ ಬದಲಾವಣೆ ಮತ್ತು ಅಸಮಾನತೆ ಹೋಗಲಾಡಿಸಿ ಎಲ್ಲರೂ ಗೌರವದಿಂದ ಬಾಳಬೇಕೆಂಬ ಪ್ರೀತಿ,ವಿಶ್ವಾಸವನ್ನು ಮೂಡಿಸಲು ಕೇವಲ ಕನಸು ಕಂಡಿಲ್ಲ.ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಹೇಳಿದರು.
ರಾಜ್ಯಸರ್ಕಾರ ಎಲ್ಲ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವಿರಬೇಕು. ಅಷ್ಟೇ ಅಲ್ಲ ಬಸವಣ್ಣನವರ ತತ್ವಾದರ್ಶಗಳನ್ನು ನಮ್ಮಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕ್ರಮ ವಹಿಸಲಾಗಿದೆ. ಬಸವ ಜಯಂತಿ ಆಚರಿಸಿ ಹಣೆಬರಹ ಎನ್ನುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.
ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಸಮಾಜವನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕು.ಮನುಷ್ಯರು ಪರಸ್ಪರ ಪ್ರೀತಿಸುವುದೇ ದೊಡ್ಡ ಗುಣ,ತಾವೇನು ಕುರುಬ ಜಾತಿಯಲ್ಲಿ ಹುಟ್ಟುತ್ತೇನೆ ಎಂದು ಅರ್ಜಿ ಹಾಕಿದ್ದೇನೆಯೇ? ಎಂದರು.
ವಿಶ್ವಗುರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ಹಲವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಯಿತು.ಆದರೆ, ಎಲ್ಲರನ್ನೂ ವಿಶ್ವಗುರು ಎಂದು ಕರೆಯಲು ಸಾಧ್ಯವಿಲ್ಲ. ಬಸವಾದಿ ಶರಣರು ಸಂಸತ್ತು ಎಂದು ಕರೆಯಲ್ಪಡುವ ಅನುಭವ ಮಂಟಪ ಸ್ಥಾಪಿಸಿ ಅಲ್ಲಮಪ್ರಭು ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಈ ಅನುಭವ ಮಂಟಪದಲ್ಲಿ ಸಾಮಾಜಿಕ, ಆರ್ಥಿಕ, ಮೌಢ್ಯ ಕಂದಾಚಾರಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು.ಅದೇ ರೀತಿ ಮನುವಾದಿಗಳ ಪ್ರಕಾರ ಮಹಿಳೆಯರಿಗೆ ಸ್ವಾತಂತ್ರ್ಯವಿರಲಿಲ್ಲದಂತಹ ಕೆಟ್ಟ ಸಂಪ್ರದಾಯ ಹುಟ್ಟುಹಾಕಿ ಮಹಿಳೆಯರಿಗೆ ಲಿಂಗಾನುಪಾತ ಮಾಡಲಾಗುತ್ತಿತ್ತು.ಇಂತಹ ಬೇಧ-ಭಾವಗಳನ್ನು ನಿರ್ಮೂಲನೆ ಮಾಡಲು ಬಸವಾದಿ ಶರಣರು ನುಡಿದಂತೆ ನಡೆದುಕೊಂಡಿದ್ದಾರೆ ಎಂದರು.
ಸಮಾಜದಲ್ಲಿ ಜಾತಿರಹಿತ, ವರ್ಗರಹಿತವಾದ ಮೌಢ್ಯಗಳ ಬಗ್ಗೆ ಗೊತ್ತಿಲ್ಲದ ಭಾಷೆಗಳಿಂದ ಧರ್ಮ ಬೋಧನೆ ಮಾಡಲಿಲ್ಲ. ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಕನ್ನಡ ಭಾಷೆಯಲ್ಲೇ ವಚನಗಳನ್ನು ರಚಿಸಿ ಜಾಗೃತಿ ಮೂಡಿಸುವ ಕೆಲಸಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಬಸವಣ್ಣನ ವಚನ ಓದಿದರು.
ಬಸವಾದಿ ಶರಣರು ಕರ್ಮಸಿದ್ಧಾಂತವನ್ನು ತಿರಸ್ಕಾರ ಮಾಡಿ ಕಾಯಕ, ದಾಸೋಹ, ಸಾಮಾಜಿಕ ಮೌಲ್ಯ ಎಲ್ಲರಿಗೂ ಅನ್ವಯವಾಗುವಂತೆ ಬಸವಣ್ಣನವರು ವಚನದಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್‌ತಂಗಡಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.