ಫೆ. ೧೧ ಮೈಸೂರಿಗೆ ಶಾ

ಬೆಂಗಳೂರು, ಫೆ. ೯- ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಬಿರುಸಾಗಿರುವಾಗಲೇ ಲೋಕಸಭಾ ಚುನಾವಣೆಯ ತಯಾರಿ ಬಗ್ಗೆ ಮಾರ್ಗದರ್ಶನ, ಸಲಹೆ, ಸೂಚನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ತಿಂಗಳ ೧೧ ರಂದು ಮೈಸೂರಿನಲ್ಲಿ ಕಾರ್ಯಕರ್ತರು ಹಾಗೂ ಪ್ರಮುಖ ಮುಖಂಡರ ಸಭೆ ನಡೆಸುವರು.
ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಳ್ಳಲು ನಾಳೆ ಸಂಜೆ ದೆಹಲಿಯಿಂದ ನೇರವಾಗಿ ಮೈಸೂರಿಗೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದು, ಫೆ. ೧೧ ರಂದು ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ನಂತರ ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗುವರು.ಇದಾದ ಬಳಿಕ ಸಂಜೆ ಅವರು ಮೈಸೂರಿನಲ್ಲಿ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರ ಸಭೆ ನಡೆಸುವರು.
ಈ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಸಿದ್ಧತೆ, ಸಂಭಾವನೀಯ ಅಭ್ಯರ್ಥಿಗಳ ಆಯ್ಕೆ ಎಲ್ಲದರ ಬಗ್ಗೆಯೂ ಚರ್ಚೆಗಳು ನಡೆಯಲಿದ್ದು, ರಾಜ್ಯ ಬಿಜೆಪಿ ಲೋಕಸಭಾ ಚುನಾವಣೆಯ ಬಗ್ಗೆ ನಡೆಸಿರುವ ತಯಾರಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಿರುವ ಅಮಿತ್ ಶಾ, ಕೆಲವೊಂದು ಸಲಹೆ ಸೂಚನೆ ನೀಡುವರು.
ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಚರ್ಚಿಸುವ ಅವರು, ಮುಖಂಡರು ಆದಷ್ಟು ಅಭ್ಯರ್ಥಿಗಳ ಆಯ್ಕೆಯನ್ನು ಅಖೈರು ಮಾಡಲಾಗುತ್ತದೆ. ಪಕ್ಷದ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ಅದಕ್ಕೆ ಬದ್ಧರಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವಂತೆಯೂ ಸಭೆಯಲ್ಲಿ ಸೂಚನೆ ನೀಡುವರು ಎಂದು ಹೇಳಲಾಗಿದೆ. ಈ ಮೊದಲು ಅಮಿತ್ ಶಾ ರವರು ಬೆಂಗಳೂರಿಗೆ ಬಂದು ಲೋಕಸಭಾ ಕ್ಲಸ್ಟರ್ ಸಭೆ ನಡೆಸುವರು ಎಂದು ಹೇಳಲಾಗಿತ್ತಾದರೂ ಅವರ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆಯಾಗಿದ್ದು, ಮೈಸೂರಿನಲ್ಲೇ ಕಾರ್ಯಕರ್ತರ ಸಭೆ, ಪ್ರಮುಖ ಮುಖಂಡರ ಸಭೆಗಳು ನಡೆಯಲಿವೆ.