ಫೆ,೨೩, ವಿಶ್ವ ಉದ್ಯಮ ಸಮಾವೇಶ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಫೆ.೭-ಅಂತಾರಾಷ್ಟ್ರೀಯ ವೀರಶೈವ ಲಿಂಗಾಯತ ವತಿಯಿಂದ ಫೆ.೨೩ ರಿಂದ ೨೫ ವರೆಗೆ ಗ್ಲೋಬಲ್ ಬ್ಯುಸಿನೆಸ್ ಕಾನ್‌ಕ್ಲೇವ್ ಸಮಾವೇಶವನ್ನು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ ಎಂದು ವೀರಶೈವ ಲಿಂಗಾಯತ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪೂರು ಅವರು ಹೇಳಿದರು.
ಅವರಿಂದು ನಗರ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು, ಉದ್ಯಮಶೀಲರನ್ನು, ವೃತ್ತಿಪರರನ್ನು ಒಂದೇ ವೇದಿಕೆಯಡಿ ತರುವುದು ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿ ಪ್ರಾಯೋಗಿಕ ಮತ್ತು ದಿಟ್ಟ ಉಪಕ್ರಮಗಳನ್ನು ಅಭಿವೃದ್ಧಿಪಡಿಸುವ ಆರ್ಥಿಕ, ಕೈಗಾರಿಕಾ, ವ್ಯಾಪಾರಿ ಚಟುವಟಿಕೆಗಳನ್ನು ಮುಂದುವರೆಸುವ ಮಾರ್ಗೋಪಾಯಗಳ ಕುರಿತಂತೆ ಈ ಗ್ಲೋಬಲ್ ಬ್ಯುಸಿನೆಸ್ ಮೀಟ್‌ನಲ್ಲಿ ಚರ್ಚಿಸಲಾಗುವುದೆಂದು ಐಎಲ್‌ವೈಎಫ್‌ನ ಸಂಚಾಲಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಗತ್ತಿನಾದ್ಯಂತ ಇರುವ ವೀರಶೈವ ಲಿಂಗಾಯತರ ಸಮುದಾಯ ಉದ್ಯಮದ ದಿಗ್ಗಜರನ್ನು ಒಂದೇ ಸೂರಿನಡಿ ತರುವುದು, ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸುವುದು, ಕರ್ನಾಟಕ ಸರ್ಕಾರ ಕಲ್ಪಿಸಿರುವ ಕ್ಲಸ್ಟರ್ ಆಧಾರಿತ ದ್ವಿದಾನವನ್ನು ಕೈಗಾರಿಕೋದ್ಯಮಿಗಳು, ವ್ಯಾಪಾರ, ರೈತ ಸಮುದಾಯವನ್ನು ಉತ್ತೇಜಿಸುವುದು, ಜಿಲ್ಲಾಮಟ್ಟದಲ್ಲಿ ಸ್ಟಾರ್ಟಪ್ ಘಟಕ ಬಲಪಡಿಸುವುದು ಮತ್ತು ನಿರೀಕ್ಷಿತ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲಾಗುವುದು ಎಂದರು.
ಕರ್ನಾಟಕದಾದ್ಯಂತ ರೈತ ಸಮುದಾಯವನ್ನು ತನ್ನ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಕೃಷಿ ಪರಿಹಾರ ಅನ್ವೇಷಿಸುವುದು, ವಿಶೇಷ ಪೆವಿಲಿಯನ್ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳನ್ನು ಬಿಂಬಿಸುವುದು, ವೃತ್ತಿ ಸಮಾಲೋಚನೆ ನಡೆಸುವ ಮೂಲಕ ವಿದ್ಯಾರ್ಥಿಗಳೊಂದಿಗೆ ವರ್ಚುಯಲ್ ಸಂಪರ್ಕ ಸಾಧಿಸಲು ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದು ನಮ್ಮ ಬ್ಯುಸಿನೆಸ್ ಮೀಟ್‌ನ ಮುಖ್ಯ ಉದ್ದೇಶ ಎಂದು ತಿಳಿಸಿದರು.