ಫೆಲೋಶಿಪ್‍ಗೆ ಒತ್ತಾಯಿಸಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಹೊಸಪೇಟೆ ನ17: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ (ಸಹಾಯಧನ) ನೀಡಬೇಕು ಒತ್ತಾಯಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ಬುಧುವಾರವೂ  ಪ್ರತಿಭಟನೆ ಮುಂದುವರೆಸಿದರು.
ಅಮರಾವತಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದ ವಿದ್ಯಾರ್ಥಿಗಳು ಎಸ್‍ಸಿ, ಎಸ್‍ಟಿ ಸಂಶೋಧನಾ ವಿದ್ಯಾರ್ಥಿಗಳ ಮಾಸಿಕ ಸಹಾಯಧನ ಮತ್ತು ಸಾದಿಲ್ವಾರು ಅನುದಾನವನ್ನು ಕನ್ನಡ ವಿಶ್ವವಿದ್ಯಾಲಯ 34 ತಿಂಗಳು ಬಾಕಿ ಉಳಿಸಿಕೊಂಡಿದೆ. ಪಿಎಚ್‍ಡಿ ನಿಯಮಾಳಿಯಂತೆ ಒಬ್ಬ ಸಂಶೋಧಕ ಪ್ರವೇಶ ಪಡೆದ ದಿನಾಂಕದಿಂದ ಪ್ರತಿ ತಿಂಗಳು ಮಾಸಿಕ ಸಹಾಯಧನ ನೀಡಬೇಕು ಎಂಬ ನಿಯಮವನ್ನು ಕಳೆದ ಎರಡು ವರ್ಷದಿಂದ ಕೈ ಬಿಡಲಾಗಿದೆ. ಶೈಕ್ಷಣಿಕವಾಗಿ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಆರು ತಿಂಗಳಿಗೊಮ್ಮ ನಡೆಯುವ ಅರ್ಧವಾರ್ಷಿಕ ಪ್ರಗತಿ ಪರಿಶೀಲನಾ ವರದಿಗಳನ್ನು ಸಲ್ಲಿಸಿ ಅದರ ಜೊತೆಗೆ ಅರ್ಧವಾರ್ಷಿಕ ಪ್ರಗತಿ ವರದಿ ಶುಲ್ಕಗಳನ್ನು ಸಂದಾಯ ಮಾಡಿರುತ್ತೇವೆ.
ಆದರೂ ಯಾವುದೇ ಫೆಲೋಶಿಪ್ ಇಲ್ಲದೇ ಗುಣಮಟ್ಟದ ಸಂಶೋಧನಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗದೇ ಸಂಶೋಧನೆಗಳಿಂದ ಹೊರಗುಳಿಯುವಂತ ಸನ್ನಿವೇಶಗಳನ್ನು ಎದುರಿಸುವಂತಾಗಿದೆ ಎಂದು ದೂರಿದರು. ಎಸ್‍ಸಿಎಸ್‍ಪಿ/ಟಿಎಸ್‍ಪಿ ಯೋಜನೆಯಿಂದ ಸರ್ಕಾರ ಕಾಲ, ಕಾಲಕ್ಕೆ ಹಣವನ್ನು ವಿಶ್ವವಿದ್ಯಾಲಯಕ್ಕೆ ಬಿಡುಗಡೆ ಮಾಡಿದೆ. 97 ಎಸ್‍ಸಿ, 37 ಎಸ್‍ಟಿ ವಿದ್ಯಾರ್ಥಿಗಳು ವಿವಿಯಲ್ಲಿ ಸಂಶೋಧನೆ ಮಾಡುತ್ತಿದ್ದಾರೆ ಎಂದು ಸರ್ಕಾರಕ್ಕೆ ವಿವಿ ಮನವಿ ಮಾಡಿಕೊಂಡಿತ್ತು. ಇದರನ್ವಯ 1.5 ಕೋಟಿ ರು. ಬಿಡುಗಡೆಯಾಗಿದೆ. ಆದರೆ 2018-19ನೇ ಸಾಲಿನ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಇದರಿಂದಾಗಿ ಸಂಶೋಧನಾ ಪೂರ್ವಕವಾಗಿ ಕ್ಷೇತ್ರ ಕಾರ್ಯ, ಪುಸಕ್ತಗಳ ಖರೀದಿ, ಲೇಖನ ಪ್ರಕಟಣೆ, ಸಾರಿಗೆ ವೆಚ್ಚ, ಪೇಪರ್ ಖರೀದಿ, ಪ್ರಬಂಧ ಮುದ್ರಣ, ರಾಜ್ಯ ಮತ್ತು ರಾಷ್ಟ್ರೀಯ ಸಂಕಿರಣಗಳು ಸೇರಿದಂತೆ ಇನ್ನಿತರೆ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ಹಣಕಾಸಿನ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಕನ್ನಡ ವಿವಿ ಆಡಳಿತ ಮಂಡಳಿ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರು. ಗಳಂತೆ ಮೂರು ವರ್ಷದ ಸಹಾಯಧನ ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಮುಖಂಡರಾದ ಬಸವರಾಜ, ಮಣಿಕಂಠ, ರಾಜೇಶ್ ಮಧು, ನರಸಿಂಹ ರಾಜು, ರಾಗಿಣಿ, ಪಂಪಾಪತಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಇದ್ದರು.