ವಿಶ್ವ ದಾಖಲೆ ರೀತಿಯಲ್ಲಿ ದಾಸೋಹ ಆಚರಣೆಗೆ ನಿರ್ಧಾರ

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಏರ್ಪಡಿಸಿದ್ದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರಸ್ವಾಮೀಜಿ ರವರ ೪ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಉದ್ಘಾಟಿಸಿದರು. ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ, ಸಚಿವರುಗಳಾದ ಅರಗಜ್ಞಾನೇಂದ್ರ, ಜೆ.ಸಿ. ಮಾಧುಸ್ವಾಮಿ, ವಿ.ಸೋಮಣ್ಣ, ಎಸ್.ಟಿ. ಸೋಮಶೇಖರ್, ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಹಿರಿಯ ಮುಖಂಡ ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಮತ್ತಿತರರು ಚಿತ್ರದಲ್ಲಿದ್ದಾರೆ.

ತುಮಕೂರು, ಜ. ೨೧- ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಹೆಸರುವಾಸಿಯಾಗಿದ್ದ ಡಾ. ಶ್ರೀ ಶಿವಕುಮಾರಸ್ವಾಮೀಜಿ ರವರ ಜನ್ಮ ದಿನದಂದು ದಾಸೋಹ ದಿನವನ್ನು ವಿಶ್ವ ದಾಖಲೆ ನಿರ್ಮಿಸುವ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಇಂದಿಲ್ಲಿ ತಿಳಿಸಿದರು.ನಗರದ ಸಿದ್ಧಗಂಗಾ ಮಠದಲ್ಲಿ ನಡೆದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರಸ್ವಾಮೀಜಿ ರವರ ೪ನೇ ಪುಣ್ಯ ಸ್ಮರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಈಗಾಗಲೇ ಶ್ರೀಗಳ ಜನ್ಮದಿನದಂದೇ ದಾಸೋಹ ದಿನ ಆಚರಿಸಲು ಘೋಷಿಸಲಾಗಿದೆ. ಅದರಂತೆ ದಾಸೋಹ ದಿನವನ್ನು ವಿಶ್ವ ದಾಖಲೆಯ ರೀತಿಯಲ್ಲಿ ಆಚರಿಸಲಾಗುವುದು ಎಂದರು.ಶ್ರೀ ಕ್ಷೇತ್ರಕ್ಕೆ ದಾಸೋಹಕ್ಕಾಗಿ ದೊಡ್ಡ ವ್ಯವಸ್ಥೆ ಮಾಡಲು ಸಹ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.ಶಿವಕುಮಾರಶ್ರೀಗಳು ತಮ್ಮ ಜ್ಞಾನವನ್ನು ಲೋಕ ಕಲ್ಯಾಣಕ್ಕಾಗಿ ಮುಡುಪಾಗಿಟ್ಟಿದ್ದರು. ಲೋಕ ಕಲ್ಯಾಣಕ್ಕಾಗಿ ಕರ್ತವ್ಯ ಸ ಮರ್ಪಣೆ ಮಾಡುವುದು ಕಾಯಕ. ಈ ನಿಟ್ಟಿನಲ್ಲಿ ಶ್ರೀಗಳು ಕಾಯಕ ಯೋಗಿಗಳಾಗಿ ಲಕ್ಷಾಂತರ ಬಡ ಮಕ್ಕಳಿಗೆ ಜ್ಞಾನ, ಅನ್ನ, ಆಶ್ರಯ ನೀಡಿ ಅವರ ಬಾಳಲ್ಲಿ ಬೆಳಕಾಗಿದ್ದರು ಎಂದರು.ಶ್ರೀಗಳು ಮಠಕ್ಕೆ ಬರುವ ಮಕ್ಕಳಿಗೆ ಅನ್ನ, ಆರೋಗ್ಯ, ಜ್ಞಾನದ ಜತೆಗೆ ಸಂಸ್ಕಾರವನ್ನು ಸಹ ನೀಡುತ್ತಿದ್ದರು. ಈ ರೀತಿಯ ಅನ್ನ, ಜ್ಞಾನ, ಆಶ್ರಯ ಮತ್ತು ಸಂಸ್ಕಾರ ಕೊಡುವ ಕೇಂದ್ರಗಳು ದೇಶದಲ್ಲಿ ಎಲ್ಲೂ ಇಲ್ಲ ಅದು ಸಿದ್ಧಗಂಗ ಮಠದಲ್ಲಿ ಮಾತ್ರ ಎಂದರು.ಸಾಧನೆಗೂ-ಯಶಸ್ವಿಗೂ ಸಾಕಷ್ಟು ವ್ಯತ್ಯಾಸವಿದೆ. ಸಾಧನೆಗೆ ಯಾವುದೇ ಗಡಿ ಮಿತಿ ಇಲ್ಲ. ಎಲ್ಲಿಯವರೆಗೂ ಮಾನವೀಯತೆ ಇರುತ್ತದೆಯೋ ಅಲ್ಲಿಯವರೆಗೂ ಸಾಧನೆ ಮಾತನಾಡುತ್ತಿರುತ್ತದೆ. ಈ ನಿಟ್ಟಿನಲ್ಲಿ ಶಿವಕುಮಾರಶ್ರೀಗಳು ತಮ್ಮ ಬದುಕಿನುದ್ದಕ್ಕೂ ನಡೆಯುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಎಂದರು.೧೨ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಾಮಾಜಿಕ ಕ್ರಾಂತಿ ಪ್ರಸ್ತುತ ದಿನಗಳಲ್ಲಿ ಅವಶ್ಯವಿದೆ. ಸಮಾಜದಲ್ಲಿ ಅಸ್ಪೃಶ್ಯತೆ, ಬಡತನ ನಿವಾರಣೆಯಾಗಬೇಕು ಎಂದರು.ಭಕ್ತಿ ಎಂದರೆ ಸಮರ್ಪಣೆ ಭಾವ. ಗುರು ಮತ್ತು ಭಕ್ತನಲ್ಲಿ ಉತ್ಕೃಷ್ಟವಾದ ಭಕ್ತಿ ಇರಬೇಕು. ದೇವರಲ್ಲಿ ಭಕ್ತಿಯಿಂದ ಕರಗಿ ಲೀನವಾಗಬೇಕು. ಅಂತಹ ಭಕ್ತ ಸಮೂಹ ಶ್ರೀ ಸಿದ್ಧಗಂಗಾ ಮಠಕ್ಕೆ ಇದೆ ಎಂದರು.ನಮ್ಮ ಬದುಕಿನಲ್ಲಿ ಮುಗ್ದತೆ ಮತ್ತು ಆತ್ಮ ಸಾಕ್ಷಿ ಬಹಳ ಮುಖ್ಯ. ಈ ಎರಡನ್ನೂ ಸದಾಕಾಲ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಆದರೆ, ಶ್ರೀಗಳು ತಮ್ಮ ಬದುಕಿನ ಉದ್ದಕ್ಕೂ ಇವರೆಡನ್ನೂ ಕಾಪಾಡಿಕೊಂಡಿದ್ದರು ಎಂದರು.ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಶ್ರೀಗಳ ಇತಿಹಾಸವನ್ನು ಎಲ್ಲ ಶಾಲಾ-ಕಾಲೇಜು ಮತ್ತು ಗ್ರಂಥಾಲಯಗಳಲ್ಲಿ ಆಗುವಂತಹ ಕೆಲಸವನ್ನು ಸರ್ಕಾರದ ವತಿಯಿಂದ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.ಶ್ರೀಗಳು ಹೇಳಿರುವ ಮಾತುಗಳು ಹಾಗೂ ಎಲ್ಲ ಕಾರ್ಯಗಳು ಆಗುತ್ತವೆ ಎಂದರು.ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಶ್ರೀಗಳು ಬಡತನಕ್ಕೆ ಹೆಚ್ಚು ಮಹತ್ವ ಕೊಟ್ಟು ನಿರ್ಮೂಲನೆ ಆಗಲೇಬೇಕು ಎಂದು ಹೋರಾಟ ಮಾಡುವವರಲ್ಲಿ ಮುಂಚೂಣಿಯಲ್ಲಿದ್ದರು ಎಂದರು.ಶ್ರೀಗಳು ಕಾಲಕ್ಕೆ ಬಹಳ ಮಹತ್ವ ಕೊಡುತ್ತಿದ್ದರು.ಬಡ ಮಕ್ಕಳಿಗೆ ಅನ್ನ, ವಸತಿ, ಶಿಕ್ಷಣ ನೀಡಿದ ಮಹಾನ್ ಶ್ರೇಷ್ಠ ಪುರುಷರು ಶಿವಕುಮಾರಸ್ವಾಮೀಜಿ ರವರು ಎಂದು ಬಣ್ಣಿಸಿದರು.ಇದೇ ಸಂದರ್ಭದಲ್ಲಿ ವಿಶ್ವಜ್ಯೋತಿ ಪುಸ್ತಕವನ್ನು ಸಚಿವ ಮಾಧುಸ್ವಾಮಿ ಬಿಡುಗಡೆ ಮಾಡಿದರು.ಸಮಾರಂಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್, ಸಚಿವರುಗಳಾದ ಆರಗ ಜ್ಞಾನೇಂದ್ರ , ಎಸ್.ಟಿ. ಸೋಮಶೇಖರ್, ಬಿ.ಸಿ. ನಾಗೇಶ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ, ಶಾಸಕರಾದ ಜ್ಯೋತಿ ಗಣೇಶ್, ಮಸಾಲೆ ಜಯರಾಮ್, ವೈ.ಎ. ನಾರಾಯಣಸ್ವಾಮಿ, ಮಾಜಿ ಶಾಸಕ ಸುರೇಶ್‌ಗೌಡ, ಮೇಯರ್ ಪ್ರಭಾವತಿ ಸುಧೀಶ್ವರ್ ಮತ್ತಿತರರು ಪಾಲ್ಗೊಂಡಿದ್ದರು.