ಫೆಬ್ರವರಿಯಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ

ರಾಯಚೂರು,ಜ.೨೬-ಬರುವ ಫೆಬ್ರವರಿಯಲ್ಲಿ ಸರ್ಕಾರದಿಂದ ರಾಜ್ಯಮಟ್ಟದ ಉದ್ಯೋಗಮೇಳ ಆಯೋಜಿಸುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಫೆ. ೧೯ ಮತ್ತು ೨೦ ರಂದು ಉದ್ಯೋಗಮೇಳ ಆಯೋಜಿಸಲಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವುದರೊಂದಿಗೆ ರಾಜ್ಯದಲ್ಲಿರುವ ಒಟ್ಟು ನಿರುದ್ಯೋಗ ಕುರಿತಂತೆ ಮಾಹಿತಿ ಪಡೆಯುವುದು, ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸುವುದೂ ಸೇರಿದಂತೆ ಉದ್ಯೋಗ ಒದಗಿಸಲು ಸಿದ್ಧವಿರುವ ಒಟ್ಟು ಕಂಪನಿಗಳ ಮಾಹಿತಿ ಸಂಗ್ರಹಿಸುವುದೇ ಈ ಉದ್ಯೋಗ ಮೇಳದ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು. ಉಳಿದಂತೆ ಜಿಲ್ಲೆಯಲ್ಲಿ ನೂತನವಾಗಿ ಜಿಲ್ಲೆಯಲ್ಲಿ ೨೩ ಕೋಟಿ ರೂ.ವೆಚ್ಚದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ ಆರಂಭಿಸುವ ಮೂಲಕ ಉದ್ಯೋಗ ಪಡೆಯಲು ಯುವಕರಿಗೆ ಸರ್ಕಾರ ಯೋಜನೆ ರೂಪಿಸಿದೆ ಎಂದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಯೊಳಗಡೆ ಸೇರ್ಪಡೆಯಾಗಿದೆ. ಅಭಿವೃದ್ಧಿ ಮಂಡಳಿಗೆ ನೀಡುವ ಒಟ್ಟು ಅನುದಾನದ ಶೇ. ೨೫ರಷ್ಟನ್ನು ಶಾಲೆಗಳ ಉನ್ನತೀಕರಣಕ್ಕೆ ಬಳಸಲು ತೀರ್ಮಾನಿಸಲಾಗಿದೆ. ಶಾಲೆಗಳ ದುರಸ್ಥಿಯೂ ಸಹ ಈ ಅನುದಾನದಡಿಯಲ್ಲೆ ಸೇರ್ಪಡೆಯಾಗಿದೆ ಎಂದು ಅವರು ತಿಳಿಸಿದರು.
ದೇವದುರ್ಗ ವ್ಯಾಪ್ತಿಯ ಗ್ರಾ.ಪಂಗಳಲ್ಲಿ ನರೇಗಾ ಯೋಜನೆಯಡಿ ನಡೆದಿರುವ ೧೫೦ಕೋಟಿಗೂ ಹೆಚ್ಚು ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ೩೩ ಪಿಡಿಓಗಳನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣ ಅಮಾನತಿಗೆ ಮಾತ್ರ ಸೀಮಿತವಾಗಿಲ್ಲ. ಉನ್ನತಮಟ್ಟದ ತನಿಖೆ ನಡೆಸಿ ಅಧಿಕಾರಿಗಳು ವರದಿ ಸಲ್ಲಿಸಿರುವ ಹಿನ್ನೆಲೆ, ವರದಿ ಆಧರಿಸಿ ಪಿಡಿಓಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
ಉಳಿದಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಲಾಗುವುದೆಂದು ಸಚಿವರು ತಿಳಿಸಿದರು.
ಶೆಟ್ಟರ್ ಅವರು ಕಾಂಗ್ರೆಸ್‌ಗೆ ಬಂದು ಬಿಜೆಪಿಗೆ ಹಿಂದಿರುಗಿದ ಕುರಿತಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಶೆಟ್ಟರ್ ಅವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡುವ ಮೂಲಕ ಕಾಂಗ್ರೆಸ್ ಗೌರವ ನೀಡಿತ್ತು. ಪಕ್ಷ ಸೇರ್ಪಡೆ ಅಥವಾ ಬಿಡುವುದು ಅವರ ವೈಯಕ್ತಿಕ ವಿಚಾರ ಎಂದ ಅವರು, ರಾಮಮಂದಿರ ಸ್ಥಾಪನೆಯಿಂದ ರಾಮರಾಜ್ಯ ಸ್ಥಾಪನೆಯಾಗುವುದಿಲ್ಲ. ಉತ್ತಮ ಆಡಳಿತದಿಂದ ರಾಮರಾಜ್ಯ ಸ್ಥಾಪನೆ ಸಾಧ್ಯ, ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಹಾಗೂ ಮಮತಾ ಅವರು ಮೈತ್ರಿಕೂಟದಿಂದ ಹೊರ ಹೋಗಿಲ್ಲ.ಸೀಟು ಹಂಚಿಕೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ. ಅದನ್ನು ಸರಿಪಡಿಸಲಾಗುವುದು ಎಂದು ಬಿಜೆಪಿಗೆ ಟಾಂಗ್ ನೀಡಿದರು. ಎಲ್ಲ ಜಿಲ್ಲೆಗಳಲ್ಲಿ ಲೋಕಸಭೆ ಸಂಯೋಜಕರಾಗಿ ಉಸ್ತುವಾರಿ ಸಚಿವರನ್ನೇ ನೇಮಕ ಮಾಡಲಾಗಿದೆ. ಆದರೆ, ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಚಿವ ಬೋಸ್‌ರಾಜ್ ಅವರನ್ನು ನೇಮಕ ಮಾಡಿರುವುದು ಹೈಕಮಾಂಡ್ ನಿರ್ಧಾರ. ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ರಾಯಚೂರು ನಗರದ ವಾರ್ಡ್ ೨೯ ರಲ್ಲಿ ಸರ್ಕಾರಕ್ಕೆ ಸೇರಿದ ಸ್ಮಶಾನಭೂಮಿಯನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ನೋಂದಣಿ ಮಾಡಿಕೊಟ್ಟಿರುವ ಕುರಿತಂತೆ ಮಾಹಿತಿ ಕೇಳಲಾಗಿದೆ. ಒಂದು ವೇಳೆ ಸ್ಮಶಾನಭೂಮಿ ಸರ್ಕಾರಕ್ಕೆ ಸೇರಿದೆಂದು ಸಾಬೀತಾದರೆ ನೋಂದಣಾಧಿಕಾರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಲಾಗುವುದು. ಅಂಗನವಾಡಿ ಪೌಷ್ಠಿಕ ಆಹಾರ ವಿತರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಲೋಪದೋಷ ಸರಿಪಡಿಸಲು ಜಿಪಂ ಸಿಇಓಗಳಿಗೆ ಸೂಚಿಸಲಾಗುವುದು.