ಫುಟ್‌ಪಾತ್ ವ್ಯಾಪಾರಿಗಳಿಗೆ ಮಳಿಗೆ ಕಟ್ಟಿಸಿಕೊಡಿ

ದಾವಣಗೆರೆ: ಯಾರನ್ನೂ ಅವಲಂಬಿಸಿದೆ ಸಾಲ ಮಾಡಿಕೊಂಡು ಬೀದಿ ಬದಿಯಲ್ಲಿ ವ್ಯಾಪಾರ ನಡೆಸಿಕೊಂಡು ಸ್ವಾವಲಂಬಿಗಳಾಗಿ ಬದುಕುತ್ತಿರುವ ಫುಟ್‌ಪಾತ್ ವ್ಯಾಪಾರಿಗಳಿಗೆ ಶಾಶ್ವತ ವ್ಯಾಪಾರ ಸ್ಥಳಗಳನ್ನು ಗುರುತಿಸಿಕೊಟ್ಟು, ಪಾಲಿಕೆಯಿಂದ ಮಳಿಗೆ ನಿರ್ಮಿಸಿಕೊಟ್ಟು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಬುಧವಾರ ಮಧ್ಯಾಹ್ನ ಜಿಲ್ಲಾ ಫುಟ್‌ಪಾತ್ ವ್ಯಾಪಾರಿಗಳ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಪಾಲಿಕೆಯ ಆವರಣದಲ್ಲಿ ಜಿಲ್ಲಾ ಫುಟ್‌ಪಾತ್ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಬೀದಿ ಬದಿ ವ್ಯಾಪಾರಿಗಳು ತಮಗೆ ಯಾವುದೇ ಪರಿಹಾರ ಕಲ್ಪಿಸದೇ ಏಕಾಏಕಿ ಒಕ್ಕಲೆಬ್ಬಿಸಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ಮುಖಂಡ ಎಚ್.ಕೆ.ರಾಮಚಂದ್ರಪ್ಪ, ಕಳೆದ ೪೦ ವರ್ಷಗಳಿಂದ ದಾವಣಗೆರೆ ನಗರದ ರಸ್ತೆಗಳ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಬದುಕು ನಡೆಸುತ್ತಿದ್ದಾರೆ. ಇಲ್ಲಿನ ಬಾಪೂಜಿ ಆಸ್ಪತ್ರೆ ಮುಂಭಾಗದ, ಸಿ.ಜಿ. ಆಸ್ಪತ್ರೆ ಕಾಂಪೌಂಡ್‌ನಲ್ಲಿ ಬಿಸಿನೀರು, ಎಳೆನೀರು, ಗಂಜಿ, ತಿಂಡಿ, ಊಟ, ಹಣ್ಣುಗಳು ಮಾರಿಕೊಂಡು ಹಲವಾರು ವ್ಯಾಪಾರಸ್ಥರು ಜೀವನ ನಡೆಸುತ್ತಿದ್ದಾರೆ. ಫುಟ್‌ಪಾತ್ ವ್ಯಾಪಾರಿಗಲು ಹಗಲಿರುಳು ವ್ಯಾಪಾರ ಮಾಡಿದರೂ ಎರಡು ಹೊತ್ತಿನ ಗಂಜಿಗೂ ಸಾಲುತ್ತಿಲ್ಲ. ಇದರ ಮಧ್ಯೆ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ದುಡಿದು ತಿನ್ನುವ ಫುಟ್‌ಪಾತ್ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಮುಂದಾಗುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿ.ಜಿ. ಆಸ್ಪತ್ರೆ ಹಿಂಭಾಗದ ಕಾಂಪೌಂಡಿಗೆ, ಬಾಪೂಜಿ ಆಸ್ಪತ್ರೆ ಮುಂಭಾಗದ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಕಟ್ಟಿಸಿಕೊಡಬೇಕು, ಸಿ.ಜಿ. ಆಸ್ಪತ್ರೆ ಹಿಂಭಾಗದ ಚರಂಡಿ ಕಾಮಗಾರಿ ಮುಗಿದಿದೆ. ಕಾಂಪೌಂಡ್ ಪೂರ್ಣವಾಗಿ ಬಿದ್ದಿದ. ೮ ಅಡಿ ಕಾಂಪೌಂಡ್ ಹಿಂದಕ್ಕೆ ಕಟ್ಟಿಸಿ, ಮಳಿಗೆ ಕಟ್ಟಿಸಿ ಕೊಟ್ಟು ಬೀದಿ ವ್ಯಾಪಾರಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.
ನಿರುದ್ಯೋಗ ಸಮಸ್ಯೆಯನ್ನು ಗಣನೆಗೆ ತೆಗೆದುಕೊಳ್ಳದೇ ಅಲ್ಪಸ್ವಲ್ಪ ಬಂಡವಾಳ ಹೂಡಿ ವ್ಯಾಪಾರ ಮಾಡಿಕೊಂಡು ನಗರದಲ್ಲಿ ಸಾವಿರಾರು ಜನರು ಜೀವನ ಕಟ್ಟಿಕೊಂಡಿದ್ದಾರೆ. ಇವರನ್ನು ಅಧಿಕಾರಿಗಳು ಒಕ್ಕಲೆಬ್ಬಿಸಿದ್ದೇ ನಿಜವಾದರೆ ಇವರೆಲ್ಲರೂ ದುಡಿಮೆ ಕಳೆದುಕೊಂಡು ಕಳ್ಳತನ, ಕೊಲೆ, ಮೋಸ, ಸುಲಿಗೆಕೋರರಾಗಿ ಸಮಾಜ ಘಾತುಕರಾಗಿ ಬದಲಾಗುವ ಸಾಧ್ಯತೆ ಇದೆ. ಆದ್ದರಿಂದ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ದುಸ್ಸಾಹಸಕ್ಕೆ ಅಧಿಕಾರಿಗಳು ಕೈ ಹಾಕದೇ ಶಾಶ್ವತ ಪರಿಹಾರ ವ್ಯಾಪಾರ ಸ್ಥಳಗಳನ್ನು ಗುರುತಿಸಿ ಮಳಿಗೆಗಳನ್ನು ಕಟ್ಟಿಸಿಕೊಡಬೇಕು, ಆಶ್ರಯ ಮನೆಗಳನ್ನು ಕಟ್ಟಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಆವರೆಗೆರೆ ವಾಸು, ಉಪಾಧ್ಯಕ್ಷ ಎನ್.ಟಿ. ಬಸವರಾಜ್, ಎಸ್.ಕೆ. ರಹಮತ್ ವುಲ್ಲಾ, ಸಿದ್ದೇಶಿ, ಅಲ್ಲಾಭಕ್ಷಿ, ಶಾಂತಮ್ಮ ತರಕಾರಿ, ವಾಜಿದ್ ಸಾಬ್, ಈರಮ್ಮ, ಸತ್ತಾರ್ ಸಾಬ್ ಹೆಚ್., ಗೌರಮ್ಮ, ರಾಜು ಕೆರನಹಳ್ಳಿ, ಎ. ತಿಪ್ಪೇಶಿ ಮತ್ತಿತರರು ಭಾಗವಹಿಸಿದ್ದರು.