ಫುಟ್‌ಬಾಲ್ ಪಂದ್ಯ ಕಾಲ್ತುಳಿತಕ್ಕೆ ೧೨ ಮಂದಿ ಬಲಿ

ಸ್ಯಾನ್‌ಸಾಲ್ವಡೊರ್,ಮೇ.೨೧-ಇಲ್ಲಿನ ಎಲ್ ಸಾಲ್ವಡೋರ್ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಪಂದ್ಯದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ೧೨ ಮಂದಿ ಮೃತ ಪಟ್ಟಿದ್ದಾರೆ. ಭಾರೀ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಈ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ ಏರಿಕೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ನಾಗರೀಕ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.ಅಲಿಯಾನ್ಸ್ ಮತ್ತು ಎಫ್‌ಎಎಸ್ ತಂಡಗಳ ನಡುವೆ ಪಂದ್ಯ ನಿಗದಿಯಾಗಿತ್ತು. ಈ ವೇಳೆ ಪಂದ್ಯ ವೀಕ್ಷಿಸಲು ಏಕಾಏಕಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂಕುನುಗ್ಗಲು ಉಂಟಾಗಿ ಹಲವರು ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.