ಫುಟ್ಬಾಲ್ ಜಾತ್ರೆಗೆ ಕ್ಷಣಗಣನೆ
ಕತಾರ್ ನಿಯಮಕ್ಕೆ ಅಭಿಮಾನಿಗಳು ಗರಂ

ದೋಹಾ (ಕತಾರ್), ನ.೨೦- ವಿಶ್ವದ ಮಹೋನ್ನತ ಕ್ರೀಡಾ ಹಬ್ಬಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಫಿಫಾ ವಿಶ್ವಕಪ್ ಫುಟ್ಬಾಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ ಆತಿಥೇಯ ಕತಾರ್ ಹಾಗೂ ಈಕ್ವೆಡಾರ್ ಪಂದ್ಯದ ಮೂಲಕ ಟೂರ್ನಿಗೆ ಅದ್ದೂರಿ ಚಾಲನೆ ದೊರೆಯಲಿದ್ದು, ಮಧ್ಯಪ್ರಾಚ್ಯ ರಾಷ್ಟ್ರಕ್ಕೆ ಹೆಮ್ಮೆಯ ವಿಚಾರವಾಗಿದೆ. ಆದರೆ ಕತಾರ್‌ನಲ್ಲಿ ಹಲವು ಕಠಿಣ ನಿಯಮಗಳಿದ್ದು, ಸಹಜವಾಗಿಯೇ ವಿದೇಶಿ ಅಭಿಮಾನಿಗಳಿಗೆ ಸಮಸ್ಯೆ ತಂದಿದ್ದು, ಒಟ್ಟಿನಲ್ಲಿ ಇದು ಕ್ರೀಡೆ ಎಷ್ಟರ ಮಟ್ಟಗೆ ಯಶಸ್ಸು ತರಲಿದೆ ಎಂದು ಕಾದು ನೋಡಬೇಕಿದೆ.
ಆದರೆ ವಿಶ್ವದ ಹಲವು ಕಡೆಗಳಲ್ಲಿ ನಡೆದ ವಿಶ್ವಕಪ್‌ಗೂ ಸದ್ಯ ಮಧ್ಯಪ್ರಾಚ್ಯ ರಾಷ್ಟ್ರ ಕತಾರ್‌ನಲ್ಲೂ ನಡೆಯುವ ವಿಶ್ವಕಪ್‌ಗೂ ಈಗಾಗಲೇ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಆಟದ ನಿಯಮದಲ್ಲಿ ಯಾವುದೇ ವ್ಯತ್ಯಾಸ ಇರದಿದ್ದರೂ ಆಟ ವೀಕ್ಷಿಸಲು ಬರುವ ಪ್ರವಾಸಿಗರಿರ ಪಾಲಿಗಂತೂ ಕಠಿಣ ನಿಯಮವೇ ಎದುರಾಗಿದೆ. ವಿಶ್ವದ ಇತರೆ ಭಾಗಗಳಿಗೆ ಹೋಲಿಕೆ ಮಾಡಿದರೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕಠಿಣ ಧಾರ್ಮಿಕ ನಿಯಮಗಳಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ನಿರಾಶೆ ತಂದಿದೆ ಎಂಬ ಮಾತು ಸದ್ಯ ಕೇಳಿಬರುತ್ತಿದೆ. ವಿಶ್ವಕಪ್ ಫುಟ್ಬಾಲ್ ವೇಳೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ವಸ್ತ್ರದ ಯಾವುದೇ ತಕರಾರಿಲ್ಲದೆ ಮುಕ್ತವಾಗಿ ಇರುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಬಾರಿ ಕತಾರ್‌ನಲ್ಲಿ ಅದು ಸಾಧ್ಯವಿಲ್ಲ. ಇಲ್ಲಿ ಅಭಿಮಾನಿಗಳು ತಮಗೆ ಬೇಕಾದ ಬೇಕಾಬಿಟ್ಟಿ ಉಡುಪು ಧರಿಸಿಕೊಂಡು ಇಲ್ಲಿ ಆಗಮಿಸುವಂತಿಲ್ಲ. ಅಲ್ಲದೆ ಸ್ಟೇಡಿಯಂಗಳಲ್ಲಿ ಮದ್ಯಪಾನ ನಿಷೇಧದ ನಿರ್ಧಾರ ಹೆಚ್ಚಿನ ಅಭಿಮಾನಿಗಳಿಗೆ ಸಿಡಿಲು ಬಡಿದಂತಾಗಿದೆ. ಒಂದೆಡೆ ಕತಾರ್ ನಾವು ಜಾಗತಿಕ ಅಭಿಮಾನಿಗಳಿಗೆ ಎಲ್ಲಾ ರೀತಿಯ ಸ್ವಾಗತ ನೀಡಲಿದ್ದೇವೆ ಎಂದು ತಿಳಿಸಿದರೂ ಅದನ್ನು ಪೂರ್ಣರೂಪದಲ್ಲಿ ಕಾಯಕಕ್ಕೆ ಇಳಿಸಿಲ್ಲ. ವಸ್ತ್ರ, ಪಾನ ವಿಚಾರದಲ್ಲಿ ಕಠಿಣ ನಿಯಮ ಇರುವ ಹಿನ್ನೆಲೆಯಲ್ಲಿ ಜಾಗತಿಕ ಫುಟ್ಬಾಲ್ ಪ್ರೇಮಿ ಅಭಿಮಾನಿಗಳು ಇಲ್ಲಿಗೆ ಆಗಮಿಸುವರೇ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಮೂಡಿದೆ. ಸ್ಟೇಡಿಯಂನಲ್ಲಿ ಮದ್ಯಪಾನಕ್ಕೆ ಅವಕಾಶ ನೀಡದಿದ್ದರೂ ಕೆಲವೊಂದು ದುಬಾರಿ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಅವಕಾಶ ನೀಡಲಾಗಿದೆ. ಆದರೆ ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುತ್ತಿರುವುದು ಕಂಡುಬಂದರೆ ಭಾರೀ ದಂಡದ ಜೊತೆಗೆ ಜೈಲುಶಿಕ್ಷೆ ನೀಡಲಾಗುತ್ತದೆ. ಇನ್ನು ಡ್ರಗ್ಸ್, ಗಾಂಜಾ ವಿಚಾರಕ್ಕೆ ಬಂದರೆ ಕೂಡ ಕತಾರನಲ್ಲಿ ಕಠಿಣ ನಿರ್ಬಂಧವಿದೆ. ಒಬ್ಬ ವ್ಯಕ್ತಿ ಸ್ವಲ್ಪ ಪ್ರಮಾಣದಲ್ಲೂ ಡ್ರಗ್ಸ್ ಹೊಂದಿದ್ದರೆ ಜೈಲಿಗಟ್ಟಲಾಗುತ್ತದೆ. ಇನ್ನು ಕತಾರ್‌ನಲ್ಲಿ ಅವಿವಾಹಿತ ದಂಪತಿ ಒಟ್ಟಿಗೆ ವಾಸಿಸುವುದು ಅಥವಾ ವಿವಾಹೇತರ ಲೈಂಗಿಕತೆಯು ಶಿಕ್ಷಾರ್ಹ ಅಪರಾಧವಾಗಿದೆ. ಒಂದು ವೇಳೆ ಈ ರೀತಿಯ ಜೋಡಿ ಕಂಡುಬಂದರೆ ಜೈಲಿಶಿಕ್ಷೆ ಅನುಭವಿಸುವುದು ಖಂಡಿತ. ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳಬಹುದು. ಅಲ್ಲದೆ ಹೊಟೇಲ್ ರೂಮ್‌ಗಳಲ್ಲಿ ಕೊಠಡಿಗಳಲ್ಲಿ ತಂಗಬಹುದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ರೀತಿಯಲ್ಲಿ ವರ್ತಿಸುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ರೀತಿಯ ನಿಯಮ ಹೇರುವುದು ಎಷ್ಟರಮಟ್ಟಿನ ಸರಿ ಎಂಬ ಮಾತು ಇದೀಗ ಅಭಿಮಾನಿಗಳಿಂದ ಕೇಳಿಬರುತ್ತಿದೆ. ಅದೂ ಅಲ್ಲದೆ ಸಲಿಂಗ ವಿರುದ್ಧ ಕೂಡ ಕತಾರ್ ಕಠಿಣ ನಿಯಮ ಹೇರಿದೆ. ಒಟ್ಟಿನಲ್ಲಿ ಫಿಫಾ ವಿಶ್ವಕಪ್ ವೇಳೆ ಎಲ್ಲಾ ರೀತಿಯ ಮೋಜುಮಸ್ತಿ ನಡೆಸುವ ಅಭಿಮಾನಿಗಳಿಗೆ ಈ ಬಾರಿ ಕತಾರ್‌ನಲ್ಲಿ ಕಠಿಣ ನಿಯಮವೇ ಎದುರಾಗಿದೆ. ಒಂದು ವೇಳೆ ಇದೇ ಕಾರಣಕ್ಕ ಅಭಿಮಾನಿಗಳು ಕತಾರ್‌ಗೆ ಆಗಮಿಸಿದೇ ಇದ್ದರೂ ಆಗ ಆಯೋಜಕರಿಗೆ ದೊಡ್ಡ ಮಟ್ಟಿನ ಆರ್ಥಿಕ ನಷ್ಟ ಉಂಟಾಗುವುದು ಖಚಿತ.