ಫಿಜಿಯಲ್ಲಿ ಬಿದ್ರಿ ಕಲೆಗೆ ಮಾರುಕಟ್ಟೆ: ಭರವಸೆ

ಬೀದರ್:sಸೆ.23: ಕೋವಿಡ್ ವೇಳೆ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಕೈಗೊಂಡ ವಿವಿಧ ಕಾರ್ಯಗಳ ಕುರಿತು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರು ಹೊರ ತಂದಿರುವ ‘ಸಂಜೀವಿನಿ’ ಕೃತಿಯನ್ನು ಫಿಜಿ ಗಣರಾಜ್ಯದ ಹೈಕಮಿಷನರ್ ಕಮಲೇಶ್ ಪ್ರಕಾಶ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು.

ಕೋವಿಡ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಸೋಂಕಿನ ಸಂದರ್ಭದಲ್ಲಿ ಬಹಳಷ್ಟು ಸಂಘ, ಸಂಸ್ಥೆಗಳು ಜನಸಾಮಾನ್ಯರ ನೆರವಿಗೆ ಧಾವಿಸಿದವು. ತಾನು ಕೈಗೊಂಡ ಸೇವಾ ಕಾರ್ಯಗಳ ಕುರಿತು ಶಾಂತೀಶ್ವರಿ ಸಂಸ್ಥೆ ಕೃತಿ ಹೊರ ತಂದಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.

ಭಾರತ ಫಿಜಿ ದೇಶಕ್ಕೆ 1 ಮಿಲಿಯನ್ ಕೋವಿಡ್ ಲಸಿಕೆ ಕೊಟ್ಟು ಔದರ್ಯ ಮೆರೆದಿದೆ. ಭಾರತ-ಫಿಜಿ ಸಂಬಂಧ ಇನ್ನಷ್ಟು ವೃದ್ಧಿಸಲು ಇಂಡೋ-ಫಿಜಿ ಸ್ನೇಹ ಒಕ್ಕೂಟ ರಚಿಸಲಾಗುವುದು. ಶಿವಯ್ಯ ಅವರ ಕೋರಿಕೆ ಮೇರೆಗೆ ಫಿಜಿಯಲ್ಲಿ ಬಿದ್ರಿ ಕಲೆಗೆ ಮಾರುಕಟ್ಟೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕೋವಿಡ್ ಮಹಾಮಾರಿಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಂಘ, ಸಂಸ್ಥೆಗಳು ಸಹಾಯಹಸ್ತ ಚಾಚಿವೆ. ಕೋವಿಡ್ ನಿಯಂತ್ರಣಕ್ಕೆ ಅವಿರತ ಶ್ರಮಿಸಿವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ನಟ ಹಾಗೂ ದೆಹಲಿ ಈಶಾನ್ಯ ಸಂಸದ ಮನೋಜ್ ತಿವಾರಿ ನುಡಿದರು.

ಭಾರತ-ಫಿಜಿ ಬಾಂಧವ್ಯ ವೃದ್ಧಿ, ಬೀದರ್ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕøತಿ, ವಿಶ್ವ ಪ್ರಸಿದ್ಧ ಬಿದ್ರಿ ಕಲೆಯನ್ನು ಸಾಗರದಾಚೆಗೂ ಪರಿಚಯಿಸುವ ಭಾಗವಾಗಿ ಫಿಜಿ ರಾಯಭಾರ ಕಚೇರಿಯಲ್ಲಿ 70 ಪುಟಗಳ ಸಂಜೀವಿನಿ ಕೃತಿ ಬಿಡುಗಡೆಗೊಳಿಸಲಾಗಿದೆ ಎಂದು ಶಿವಯ್ಯ ಸ್ವಾಮಿ ತಿಳಿಸಿದರು.

ಒಂದೂವರೆ ವರ್ಷದ ಕೋವಿಡ್ ಅವಧಿಯಲ್ಲಿ ಶಾಂತೀಶ್ವರಿ ಸಂಸ್ಥೆಯು ಬೀದರ್ ಜಿಲ್ಲೆ, ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ಕಲಾವಿದರು, ಅಲೆಮಾರಿಗಳು, ಬಡವರಿಗೆ ಆಹಾರಧಾನ್ಯ ಕಿಟ್, ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ಗ್ಲೌಸ್, ರೈತರಿಗೆ ಬೀಜ, ಎರೆಹುಳು ಗೊಬ್ಬರ, ಬೇವಿನ ಎಣ್ಣೆ, ಗೋಶಾಲೆಗಳಿಗೆ ಮೇವು ವಿತರಣೆ, ಕೋವಿಡ್ ಲಸಿಕೆ ಜಾಗೃತಿ ಸೇರಿದಂತೆ ಅನೇಕ ಕಾರ್ಯಗಳನ್ನು ಕೈಗೊಂಡಿತು. ಕೃತಿ ಈ ಎಲ್ಲ ಕಾರ್ಯಗಳ ವಿವರ ಹಾಗೂ ಕೋವಿಡ್ ಸುರಕ್ಷತಾ ಕ್ರಮಗಳ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಿದರು.

ಫಿಜಿ ಕೌನ್ಸಿಲರ್ ಜನರಲ್ ನಿಲೇಶ್ ರೊನಿಲ್‍ಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.