ಫಾಝಿಲ್ ಕೊಲೆ 21 ಮಂದಿಗೆ ಪೊಲೀಸ್ ಡ್ರಿಲ್

ಮಂಗಳೂರು,ಜು.೩೦-ಸುರತ್ಕಲ್‌ನ ಮಂಗಳ ಪೇಟೆಯ ಮುಹಮ್ಮದ್ ಫಾಝಿಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ನಗರ ಪೊಲೀಸರು ೨೧ ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮುಹಮ್ಮದ್ ಫಾಝಿಲ್ ಕೊಲೆಗೈದಿರುವ ಶಂಕೆಯ ಮೇಲೆ ಸುರತ್ಕಲ್, ಬಜಪೆ, ಪಣಂಬೂರು, ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ೨೧ ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿ ಪೊಲೀಸರು ಮಾಹಿತಿಯನ್ನು ಸಂಗ್ರಹಿಸ ತೊಡಗಿದ್ದಾರೆ. ಕೊಲೆಯ ತನಿಖೆಯ ಉಸ್ತುವಾರಿಯನ್ನುಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಆಲೋಕ್ ಕುಮಾರ್ ವಹಿಸಿ ನಗರದಲ್ಲಿಯೇ ಬೀಡು ಬಿಟ್ಟಿದ್ದು ಶೀಘ್ರವಾಗಿ ಅಪರಾಧಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸ ಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಹಿಂದೆ ಜಿಲ್ಲೆಯಲ್ಲಿ ಡಿಸಿಪಿಯಾಗಿದ್ದ, ಈಗ ಹಾಸನ ಎಸ್‌ಪಿ ಆಗಿರುವ ಹರಿರಾಂ ಶಂಕರ್ ಅವರನ್ನೂ ಕರೆಯಿಸಲಾಗಿದೆ.
ಕೊಲೆ ನಡೆದ ಸಮಯದಲ್ಲಿ ಅಲ್ಲಿ ಯಾವೆಲ್ಲ ಮೊಬೈಲ್‌ಗಳು ಸಕ್ರಿಯ ವಾಗಿದ್ದವು, ಯಾರು ಯಾರಿಗೆ ಕರೆ ಮಾಡಿದ್ದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದ್ದು,ಕೊಲೆಯ ಹಿಂದೆ ಕೆಲವು ಸಮಾಜ ಘಾತಕ ಶಕ್ತಿಗಳು ಇರುವುದರ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಇನ್ನೊಂದೆಡೆ ಫಾಝಿಲ್‌ಗೆ ಯಾರೊಂದಿಗಾದರೂ ದ್ವೇಷವಿತ್ತೇ, ಯಾವ ಕಾರಣಕ್ಕೆ ಕೊಲೆ ನಡೆದಿದೆ ಇತ್ಯಾದಿ ಸಹಿತ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಸಂಬಂಧಿಸಿದ ಎಲ್ಲ ಕಡೆಯ ಸಿಸಿಟಿವಿ ಫೂಟೇಜ್‌ಗಳನ್ನು ಪೊಲೀಸರು ಕಲೆಹಾಕಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿಲ್ಲ. ಎಲ್ಲ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ. ಪ್ರವೀಣ್ ಹತ್ಯೆ ಹಿಂದೆ ಇರುವವರ ಬಗ್ಗೆ ವಿಚಾರಣೆ ಮುಂದುವರಿದಿದೆ. ಸಾರ್ವ ಜನಿಕರೂ ಸರಕಾರ, ಪೊಲೀಸರ ಮೇಲೆ ವಿಶ್ವಾಸವಿಟ್ಟು ಸಹಕರಿಸಬೇಕು ಎಂದು ಅಲೋಕ್ ಕುಮಾರ್ ವಿನಂತಿಸಿದರು.
ಪ್ರವೀಣ್ ಹತ್ಯೆಗೂ ಇದಕ್ಕೂ ಏನಾದರೂ ಸಂಬಂಧ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಈಗಾಗಲೇ ಈ ನಿರ್ಧಾರಕ್ಕೆ ಬರಲಾಗದು ಎಂದರು.
ದಕ್ಷಿಣಕನ್ನಡದಲ್ಲಿ ೮ ದಿನಗಳಲ್ಲಿ ೩ ಹತ್ಯೆ ನಡೆದಿರುವುದರಿಂದ ಜಿಲ್ಲೆ ಮತ್ತೆ ಸುದ್ದಿಯಾಗಿದೆ. ಈ ಪ್ರಕರಣ ಪೊಲೀಸರಿಗೆ ಸವಾಲಾಗಿದೆ. ಆದರೆ ಅದನ್ನು ಭೇದಿಸಿ ಆರೋಪಿಗಳನ್ನು ಹಿಡಿಯುತ್ತೇವೆ. ನಗರ ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿ ಸಿದ್ದು, ಕಾನೂನು ಸುವ್ಯವಸ್ಥೆಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು.
ಶೀಘ್ರ ಬಂಧನ: ಫಾಝಿಲ್ ಹತ್ಯೆ ನಡೆದ ಸ್ಥಳಕ್ಕೆ ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಎಡಿಜಿಪಿ ಆಲೋಕ್ ಕುಮಾರ್, ಫಾಝಿಲ್ ಅಂತ್ಯಸಂಸ್ಕಾರ ಶಾಂತಿಯುತವಾಗಿ ನಡೆದಿದ್ದು, ಫಾಝಿಲ್ ಕುಟುಂಬದವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಸಾರ್ವಜನಿಕರು, ಸಮುದಾಯದವರೂ ಸಹಕರಿಸಿದ್ದಾರೆ. ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಷ್ಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಅಥವಾ ಬಂಧಿಸಲಾಗಿದೆ ಎಂಬ ಪ್ರಶ್ನೆಗೆ, ಸುರತ್ಕಲ್ ಕೊಲೆ ಪ್ರಕರಣದಲ್ಲಿ ವಾಹನ ಸಂಖ್ಯೆ, ಸಿಸಿ ಟಿವಿ ಆಧಾರದಲ್ಲಿ ಸಾಕ್ಷ್ಯ ಕಲೆ ಹಾಕುತ್ತಿದ್ದೇವೆ. ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವುದು ತನಿಖೆಯ ಭಾಗ. ಆದರೆ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.