ಫಾಜಿಲ್ ಕೊಲೆ ೬ಮಂದಿ ಸೆರೆ

ಮಂಗಳೂರು,ಆ.೨-ಸುರತ್ಕಲ್‌ನ ಕಾಟಿಪಳ್ಳ ಮಂಗಳಪೇಟೆಯ ಮೊಹಮ್ಮದ್ ಫಾಝಿಲ್‌ನನ್ನು ಕೊಲೆಗೈದ ಆರು ಮಂದಿ ಆರೋಪಿಗಳನ್ನು ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ಬಂಧಿಸಿದ್ದಾರೆ.
ಶ್ರೀನಿವಾಸ ಕಾಟಿಪಳ್ಳ(೨೩), ಅಭಿಷೇಕ್(೨೩) ದೀಕ್ಷಿತ್ ಕಾಟಿಪಳ್ಳ(೨೧), ಸುಹಾಸ್( ೨೯), ಮೋಹನ್(೨೩) ಮತ್ತು ಗಿರೀಶ್(೨೭) ಬಂಧಿತ ಆರೋಪಿಗಳಾಗಿದ್ದು, ಫಾಝಿಲ್‌ನನ್ನು ನಾವೆಲ್ಲರೂ ಸೇರಿ ಸಂಚು ರೂಪಿಸಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಬಳಸಲಾಗಿರುವ ಕಾರು ಹಾಗೂ ಕಾರಿನ ಮಾಲೀಕರನ್ನು ವಶಕ್ಕೆ ಪಡೆದು ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಹೇಳಿದರು.
ಬಜ್ಪೆಯ ಸುಹಾಸ್ ಶೆಟ್ಟಿ ಹಾಗೂ ಅಭಿಷೇಕ್ ಕಳೆದ ಜು.೨೭ರಂದು ಸುರತ್ಕಲ್‌ನ ಒಂದು ಜಾಗದಲ್ಲಿ ಎಲ್ಲಾ ಆರೋಪಿಗಳನ್ನು ಒಗ್ಗೂಡಿಸಿ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಳಿಕ ಮೂರು ದಿನಕ್ಕೆ ೧೫ ಸಾವಿರ ಹಣ ನೀಡುವುದಾಗಿ ಅಜಿತ್ ಕ್ರಾಸ್ತಾ ಎನ್ನುವವರಿಂದ ಕಾರು ಬಾಡಿಗೆಗೆ ಪಡೆದಿದ್ದಾರೆ. ಅಜಿತ್‌ಗೆ ವಿಚಾರ ಗೊತ್ತಿದ್ದರೂ ಹಣದ ಆಸೆಗೆ ಕಾರು ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ಸಂಬಂಧ ೫೧ ಮಂದಿಯನ್ನು ವಿಚಾರಣೆ ನಡೆಸಿ, ಪ್ರಕರಣದ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.