ಫಾಜಿಲ್ ಕೊಲೆ ಕಾರು ಮಾಲೀಕ ಸೆರೆ ೮ ಮಂದಿಗೆ ಡ್ರಿಲ್

ಮಂಗಳೂರು,ಜು.೩೧-ಸುರತ್ಕಲ್‌ನಲ್ಲಿ ಫಾಜಿಲ್ ಕೊಲೆ ಸಂಬಂಧಿಸಿದಂತೆ ಹತ್ಯೆಯ ವೇಳೆ ಇದ್ದ ಕಾರು ಮಾಲೀಕ ಅಜಿತ್ ಡಿಸೋಜನನ್ನು ಬಂಧಿಸಿದ್ದು,ಆತನಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನ ಜೊತೆ ಸಂಪರ್ಕ ಇದೆ ಎಂದು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದರು.
ಫಾಜಿಲ್ ಕೊಲೆ ಸಂಬಂಧ ಇಲ್ಲಿಯವರೆಗೆ ೫೧ ಮಂದಿಯಿಂದ ಮಾಹಿತಿಯನ್ನು ಪಡೆದು ೮ ಮಂದಿಯನ್ನು ವಶಕ್ಕೆ ಪಡೆದು ವಿಸ್ತೃತ ತನಿಖೆಯನ್ನು ನಡೆಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಘಟನೆ ಬಳಿಕ ಸಿಸಿಟಿವಿ ದೃಶ್ಯ ಆಧರಿಸಿ ೮ ಇಯಾನ್ ಕಾರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿಯಲ್ಲಿ ಕಾರಿನ ನಂಬರ್ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಆದರೆ ಕಾರಿನ ಇತರ ಗುರುತುಗಳನ್ನು ಹಿಡಿದು ವಿಚಾರಣೆ ನಡೆಸಿ ಕಾರಿನ ಮಾಲೀಕ ಅಜಿತ್‌ನನ್ನು ಬಂಧಿಸಿದ್ದೇವೆ ಎಂದರು.
ಇಯಾನ್ ಕಾರ್ ಮಾಲೀಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತನಿಂದ ಯಾರು ಕಾರು ಬಾಡಿಗೆಗೆ ಪಡೆದಿದ್ದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಆದರೆ ಕೊಲೆಗೆ ಬಳಸಿದ ಕಾರು ಸಿಕ್ಕಿಲ್ಲ. ಅದು ಆರೋಪಿಗಳ ಬಳಿಯೇ ಇರಬಹುದು. ಆರೋಪಿಗಳು ಅಜಿತ್‌ನಿಂದ ಕಾರ್ ಬಾಡಿಗೆಗೆ ಪಡೆದಿದ್ದರು. ಫಾಜಿಲ್ ತಂದೆ ಉನ್ನತಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ಬಗ್ಗೆ ಹರಡುತ್ತಿರುವ ವದಂತಿಗೆ ಕಿವಿ ಕೊಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್‌ಗಳನ್ನು ಹಾಕಿರುವವರ ವಿರುದ್ಧ ೫ ಕೇಸ್ ದಾಖಲಾಗಿದೆ. ೮ ಜನರ ತಂಡದಿಂದ ಸಾಮಾಜಿಕ ಜಾಲತಾಣಗಳನ್ನು ವಾಚ್ ಮಾಡಲಾಗುತ್ತಿದೆ. ಪೋಸ್ಟ್ ಹಾಕುವವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.
ಕೋಮುಗಳ ನಡುವೆ ಘರ್ಷಣೆ ಉಂಟು ಮಾಡುವಂತಹ ಪೋಸ್ಟ್‌ಗಳನ್ನು ಹಾಕುತ್ತಿದ್ದೀರಿ. ಈ ತರ ಪೋಸ್ಟ್‌ಗಳನ್ನು ಹಾಕವವರ ಮೇಲೆ ಕೇಸ್ ದಾಖಲಾಗುತ್ತದೆ. ಇದರಿಂದ ವರ್ಷಾನುಗಟ್ಟಲೆ ಕೋರ್ಟ್‌ಗೆ ಅಲೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಐವರಿಂದ ಕೃತ್ಯ:
ಸುರತ್ಕಲ್‌ನಲ್ಲಿ ಫಾಜಿಲ್ ಕೊಲೆಗೈದ ಪ್ರಕರಣದಲ್ಲಿ ಐವರು ಆರೋಪಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕೊಲೆಗೆ ಸಂಬಂಧಪಟ್ಟಂತೆ ಬಂಧಿತರ ಪೈಕಿ ಇಬ್ಬರನ್ನು ಈ ಹಿಂದೆ ಲೋಕೇಶ್ ಕೊಡಿಕೆರೆ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದು, ಇವರಿಬ್ಬರು ಆ ಗ್ಯಾಂಗ್ ಬಿಟ್ಟಿದ್ದರು ಎನ್ನಲಾಗಿದೆ.ಕಳೆದ ಜು. ೨೮ ರಂದು ರಾತ್ರಿ ೮ರ ವೇಳೆ ಸುರತ್ಕಲ್‌ನಲ್ಲಿ ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಜಿಲ್ (೨೩)ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಬಳಿಕ ಕರಾವಳಿ ಪ್ರದೇಶದ ಹಲವು ಕಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು ಪೊಲೀಸರ ಬಿಗಿ ಕ್ರಮಗಳಿಂದ ಪರಿಸ್ಥಿತಿ ಶಾಂತವಾಗ ತೊಡಗಿದೆ.