ಫಾಕ್ಸ್ ನ್ಯೂಸ್ ಮುಖ್ಯಸ್ಥ ಮರ್ಡೊಕ್ ರಾಜೀನಾಮೆ

ವಾಷಿಂಗ್ಟನ್, ಸೆ.೨೨- ಜಗತ್ತಿನ ಸುದ್ದಿ ಮಾಧ್ಯಮ ಲೋಕದ ದೈತ್ಯ, ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಅಮೆರಿಕಾ ಫಾಕ್ಸ್ ನ್ಯೂಸ್ ಸಂಸ್ಥೆಯ ಸ್ಥಾಪಕ ರೂಪರ್ಟ್ ಮರ್ಡೊಕ್ ಅವರು ಇದೀಗ ಸಂಸ್ಥೆಯ ಮಾತೃಸಂಸ್ಥೆ ಹಾಗೂ ನ್ಯೂಸ್ ಕಾರ್ಪೊರೇಷನ್‌ನ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಮರ್ಡೊಕ್ ಅವರು ಸಂಸ್ಥೆಯಲ್ಲಿ ಗೌರವಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
೯೨ ವರ್ಷದ ಮರ್ಡೊಕ್ ‘ವಾಲ್‌ಸ್ಟ್ರೀಟ್ ಜರ್ನಲ್’ ಮತ್ತು ‘ದಿ ನ್ಯೂಯಾರ್ಕ್ ಪೋಸ್ಟ್’ನ ಮಾಲಕರೂ ಆಗಿದ್ದಾರೆ. ಮುಂದೆ ಅವರ ಹಿರಿಯ ಪುತ್ರ ಲಾಚ್ಲನ್ ಮರ್ಡೋಕ್ (೫೨) ಫಾಕ್ಸ್ ಕಾರ್ಪ್‌ನ ಸಿಇಒ ಹಾಗೂ ನ್ಯೂಸ್ ಕಾರ್ಪ್‌ನ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ಧಿಸಂಸ್ಥೆ ವರದಿ ಮಾಡಿದೆ. ರೂಪರ್ಟ್ ಮರ್ಡೋಕ್ ಫಾಕ್ಸ್ ನ್ಯೂಸ್‌ನ ಜತೆಗೆ ಫಾಕ್ಸ್ ಬ್ರಾಡ್‌ಕಾಸ್ಟ್ ನೆಟ್‌ವರ್ಕ್ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ರ ಲಾಚ್ಲನ್, ಮರ್ಡೊಕ್ ಅವರು ಸಂಸ್ಥೆಗಳಲ್ಲಿ ಗೌರವ ಅಧ್ಯಕ್ಷರಾಗಿ ಸೇವೆ ಮುಂದುವರೆಸಲಿದ್ದಾರೆ. ಅವರು ಎರಡೂ ಕಂಪೆನಿಗಳಿಗೆ ಮೌಲ್ಯಯುತ ಸಲಹೆಯನ್ನು ನೀಡುವುದನ್ನು ಮುಂದುವರಿಸುತ್ತಾರೆ ಎಂಬ ಬಗ್ಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.