ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ಗೆ ೩೦ ಶತಕೋಟಿ ಡಾಲರ್ ನೆರವು

ನ್ಯೂಯಾರ್ಕ್, ಮಾ.೧೭- ಈಗಾಗಲೇ ಬ್ಯಾಂಕ್‌ಗಳ ಕುಸಿತದಿಂದ ಅಪಾಯಕ್ಕೆ ಸಿಲುಕಿರುವ ಅಮೆರಿಕಾ ಇದೀಗ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಮತ್ತಷ್ಟು ಆರ್ಥಿಕ ಹೆಜ್ಜೆಯಟ್ಟಿದೆ. ಈಗಾಗಲೇ ಕ್ರೆಡಿಟ್ ಸ್ಯೂಸ್ಸೆಗೆ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ವಿಬಿ)ನಿಂದ ೫೪ ಶತಕೋಟಿ ಡಾಲರ್ ಸಾಲ ಲಭಿಸಿದ್ದರೆ ಇದೀಗ ತೀವ್ರ ಅಪಾಯದ ಹೊಸ್ತಿಲಲ್ಲಿರುವ ಅಮೆರಿಕಾದ ಸಣ್ಣ ಪ್ರಾದೇಶಿಕ ಬ್ಯಾಂಕ್ ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ಗೆ ಯುಎಸ್ ಬ್ಯಾಂಕ್‌ಗಳ ಸಮೂಹ ೩೦ ಶತಕೋಟಿ ಡಾಲರ್ ಮೊತ್ತದ ನೆರವು ಘೋಷಿಸಿದೆ.
ಕಳೆದ ಒಂದು ವಾರದಲ್ಲಿ ಅಮೆರಿಕಾದ ದೊಡ್ಡ ಹಾಗೂ ಸಣ್ಣ ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳು ಭಾರೀ ಕುಸಿತ ಕಂಡಿದ್ದು, ಗ್ರಾಹಕರಲ್ಲಿ ತೀವ್ರ ಎದುರಾಗಿದೆ. ಸಹಜವಾಗಿಯೇ ಇದರಿಂದ ಗ್ರಾಹಕರಲ್ಲಿ ಅಮೆರಿಕಾದ ಹಣಕಾಸಿನ ಸಂಸ್ಥೆಗಳ ಮೇಲಿನ ವಿಶ್ವಾಸ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಣಕಾಸಿನ ದ್ರವ್ಯತೆ (ನಗದು) ಕೊರತೆಯಿಂದ ಗ್ರಾಹಕರು ಒಂದೆಡೆ ತಮ್ಮ ಖಾತೆಯಲ್ಲಿರುವ ಹಣವನ್ನು ಆತಂಕದಿಂದ ವಿಥ್‌ಡ್ರಾ ಮಾಡುತ್ತಿದ್ದು, ಇದರಿಂದ ಬ್ಯಾಂಕ್‌ಗಳ ಮೇಲಿನ ಹೆಚ್ಚಿನ ಒತ್ತಡ ಬೀಳಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ವಿಶ್ವಾಸ ಮರುಗಳಿಸುವಲ್ಲಿ ಹೆಜ್ಜೆ ಹಾಕಿರುವ ಅಮೆರಿಕಾದ ಸಂಬಂಧಿತ ಸಂಸ್ಥೆಗಳು ಈಗಾಗಲೇ ತನ್ನ ಕಾರ್ಯವನ್ನು ಚುರುಕುಗೊಳಿಸಿದ್ದು, ಸಂಕಷ್ಟದಲ್ಲಿರುವ ದೇಶದ ಬ್ಯಾಂಕ್‌ಗಳಿಗೆ ಹಣಕಾಸಿನ ನೆರವು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖ್ಯಾತ ಹಣಕಾಸಿನ ಸಂಸ್ಥೆಗಳಾದ ಜೆಪಿ ಮಾರ್ಗನ್ ಹಾಗೂ ಸಿಟಿ ಗ್ರೂಪ್ ನೇತೃತ್ವದ ೧೧ ಬ್ಯಾಂಕ್‌ಗಳ ಸಮೂಹವು ನೆರವು ಘೋಷಿಸಿದೆ. ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಹಣಕಾಸಿನ ಸಂಸ್ಥೆಯಾಗಿರುವ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕಳೆದೊಂದು ವಾರದಲ್ಲಿ ತೀವ್ರ ಕುಸಿತಕ್ಕೆ ಈಡಾಗಿದೆ. ಬ್ಯಾಂಕ್ ಗ್ರಾಹಕರು ತಮ್ಮ ತಮ್ಮ ಠೇವಣಿಗಳನ್ನು ಆತಂಕದ ಪರಿಸ್ಥಿತಿ ಎಂದು ಅರಿತುಕೊಂಡು ಹಿಂಪಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ೭೦ ಪ್ರತಿಶತ ಷೇರು ಮೌಲ್ಯ ಕುಸಿತವಾಗಿತ್ತು. ಇನ್ನು ದೊಡ್ಡ ದೊಡ್ಡ ಬ್ಯಾಂಕ್‌ಗಳ ಸಣ್ಣ ಬ್ಯಾಂಕ್‌ಗಳ ನೆರವಿಗೆ ಬಂದಿರುವುದು ಅಲ್ಲಿನ ಹಣಕಾಸಿನ ವಿಶ್ಲೇಷಕರಲ್ಲಿ ಸಂತಸ ಉಂಟು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸಿನ ಅಧಿಕಾರಿಯೊಬ್ಬರು, ದೊಡ್ಡ ಬ್ಯಾಂಕ್‌ಗಳ ಗುಂಪಿನ ಬೆಂಬಲದ ಈ ಪ್ರದರ್ಶನವು ಅತ್ಯಂತ ಸ್ವಾಗತಾರ್ಹವಾಗಿದೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಅತ್ತ ಕ್ರೆಡಿಟ್ ಸ್ಯೂಸ್ಸೆ ಕೂಡ ಸ್ವಿಸ್ ನ್ಯಾಶನಲ್ ಬ್ಯಾಂಕ್‌ನಿಂದ ಸುಮಾರು ೫೪ ಶತಕೋಟಿ ಡಾಲರ್ ನೆರವಿನ ಸಾಲ ಪಡೆದುಕೊಂಡಿದ್ದು, ಬ್ಯಾಂಕ್ ಗ್ರಾಹಕರಲ್ಲಿ ವಿಶ್ವಾಸ ಮರುತುಂಬಿಸುವ ಕಾರ್ಯದಲ್ಲಿ ನಿರತವಾಗಿದೆ.