ಫಸಲ್ ಭೀಮಾ ಯೋಜನೆ: ನೋಂದಣಿ ಪ್ರಕ್ರಿಯೆಗೆ ಚಾಲನೆ

 
ಚಿತ್ರದುರ್ಗ,ನ.19;  ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ  ಜಂಟಿ ಕೃಷಿ ನಿರ್ದೇಶಕರಾದ ಡಾ.ಪಿ.ರಮೇಶಕುಮಾರ್ ಹಾಗೂ ಯುನಿವರ್ಸಲ್ ಸೊಂಪೋ ವಿಮಾ ಕಂಪನಿಯ ಜಿಲ್ಲಾ ಸಂಯೋಜಕರಾದ ಬಾಲರಾಜ್ ಅವರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶಕುಮಾರ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ 2021-22ನೇ ಸಾಲಿನ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಪ್ರಾರಂಭಗೊಳಿಸಲು ಚಾಲನೆ ನೀಡಲಾಗಿದೆ ಎಂದರು.ಬೆಳೆಗಳಿಗೆ ಡಿಸೆಂಬರ್ 12ರ ಬೆಳೆ ವಿಮೆ ನೊಂದಣಿಗೆ ಕೊನೆಯ ದಿನವಾಗಿದೆ.ಬ್ಯಾಂಕಿನಲ್ಲಿ ಬೆಳೆಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು. ತದನಂತರ ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು ಎಂದರು.
 ಆರ್ಥಿಕ ಸಂಸ್ಥೆಗಳು, ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ರೈತರನ್ನು ಬೆಳೆವಿಮೆಗೆ ನೋಂದಾಯಿಸಿದಾಗ ಬೆಳೆ ವಿಮೆ ಪ್ರಸ್ತಾವನೆಯನ್ನು ಹಾಗೂ ವಿಮಾ ಕಂತನ್ನು ನಿಗಧಿತ ಸಮಯದೊಳಗೆ ನಿಯಮಾನುಸಾರ ಅನುಷ್ಠಾನ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳತಕ್ಕದ್ದು. ನೋಂದಣಿ ಪ್ರಕ್ರಿಯೆ ಹಂತದಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ನಿರ್ಲಕ್ಷದಿಂದ ಯಾವುದೇ ಲೋಪ ದೋಪಗಳು ಉಂಟಾದಲ್ಲಿ ಅದರಿಂದಾಗುವ ಬೆಳೆ ವಿಮೆ ಪರಿಹಾರ ವ್ಯಾಜ್ಯಗಳಿಗೆ ಸಂಬಂಧಿಸಿದ ಸಂಸ್ಥೆಗಳೆ ನೇರ ಹೊಣೆಗಾರರಾಗಿರುತ್ತಾರೆ.
ಆಸಕ್ತ ರೈತರು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ ಹಾಗೂ ಅನುಮೋದಿತ ಸಾರ್ವಜನಿಕ ಸೇವಾ ಕೇಂದ್ರಗಳಲ್ಲೂ ವಿಮೆಗೆ ನೋಂದಣಿ ಮಾಡಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ಚೌಧರಿ, ಕೃಷಿ ಅಧಿಕಾರಿ ಟಿ.ಪಿ.ರಂಜಿತಾ ಸೇರಿದಂತೆ ಮತ್ತಿತರರು ಇದ್ದರು.

Attachments area