ಫಸಲ್ ಬಿಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಿ: ಡಿ.ಸಿ

ಬೀದರ:ನ.6: 2020-21ನೇ ಸಾಲಿನ ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂಜೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಆಸ್ಥೆ ವಹಿಸಬೇಕು ಎಂದು ಯುನಿವರ್ಷಲ್ ಸೋಂಪೋ ಜನರಲ್ ಇನ್ಸೂರೆನ್ಸ್ ಕಂಪನಿ ವಿಮಾ ಸಂಸ್ಥೆಯ ಪ್ರತಿನಿಧಿಗಳಿಗೂ ಸಹ ಸೂಚಿಸಿದರು.
ಈ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಾಯಿಸುವಂತೆ ಕ್ರಮ ವಹಿಸಬೇಕು. ಬೆಳೆ ವಿಮೆ ಮಾಡಿಸಲು ಬ್ಯಾಂಕ್‍ಗಳಿಗೆ ಬರುವಂತಹ ರೈತರಿಗೆ ವಿನಾಕಾರಣ ತೊಂದರೆ ಕೊಡಬಾರದೆಂದು ಎಂದು ಸೂಚಿಸಿದರು.
ಈ ವೇಳೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ ಜಿ.ಎಚ್. ಅವರು ಮಾತನಾಡಿ, ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಮುಖ್ಯ ಬೆಳೆಯಾಗಿ ಕಡಲೆ(ಮಳೆಯಾಶ್ರಿತ) ಮತ್ತು ಜೋಳ (ಮಳೆಯಾಶ್ರಿತ) ಅಧಿಸೂಚಿಸಲಾಗಿದೆ. ಇತರೆ ಬೆಳೆಗಳಾದ ಕುಸುಬೆ (ಮಳೆಯಾಶ್ರಿತ), ಗೋದಿ (ನೀರಾವರಿ), ಗೋದಿ (ಮಳೆಯಾಶ್ರಿತ), ಜೋಳ (ನೀರಾವರಿ), ಸೂರ್ಯಕಾಂತಿ (ಮಳೆಯಾಶ್ರಿತ), ಸೂರ್ಯಕಾಂತಿ (ನೀರಾವರಿ) ಕಡಲೆ (ನೀರಾವರಿ) ವಿವಿಧ ತಾಲ್ಲೂಕಿಗೆ ನಿಗದಿಪಡಿಸಲಾಗಿದೆ. ಹೋಬಳಿ ಮಟ್ಟಕ್ಕೆ ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟಕ್ಕೆ ಒಳಪಡುವÀ ಬೆಳೆಗಳಾದ ಜೋಳ (ಮಳೆಯಾಶ್ರಿತ) ಬೆಳೆಗೆ ನವೆಂಬರ್ 30 ಹಾಗೂ ಕಡಲೆ ಮಳೆಯಾಶ್ರಿತ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಪಾಲ್ಗೊಳ್ಳಲು ಡಿಸೆಂಬರ್ 31ರವರೆಗೆ ಅವಕಾಶವಿದೆ ಎಂದು ತಿಳಿಸಿದರು.
ಹೋಬಳಿ ಮಟ್ಟಕ್ಕೆ ಒಳಪಡುವÀ ಬೆಳೆಗಳಾದ ಕುಸುಬೆ (ಮಳೆಯಾಶ್ರಿತ) ಬೆಳೆಗೆ ನವೆಂಬರ್ 30 ಕೊನೆಯ ದಿನವಾಗಿದೆ. ಮತ್ತು ಗೋದಿ (ಮಳೆಯಾಶ್ರಿತ) ಡಿಸೆಂಬರ್ 16 ಹಾಗೂ ಕಡಲೆ (ನೀರಾವರಿ), ಜೋಳ (ನೀರಾವರಿ), ಸೂರ್ಯಕಾಂತಿ(ನೀರಾವರಿ), ಸೂರ್ಯಕಾಂತಿ (ಮಳೆಯಾಶ್ರಿತ), ಗೋದಿ(ನೀರಾವರಿ), ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಪಾಲ್ಗೊಳ್ಳಲು ಡಿಸೆಂಬರ್ 31 ಕೊನೆಯ ದಿನವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ 2020-21ನೇ ಸಾಲಿನ ಪರಿಷ್ಕøತ ಮಾರ್ಗಸೂಚಿಯಲ್ಲಿ ಬೆಳೆಸಾಲ ಪಡೆದ ರೈತರಿಗಾಗಿ ಒಪಿಟಿ ಔಟ್ ಮತ್ತು ಒಪಿಟಿ ಇನ್ ಎಂಬ ಅವಕಾಶವನ್ನು ರೈತರಿಗೆ ನೀಡಲಾಗಿದೆ. ಇದರಲ್ಲಿ ಬೆಳೆಸಾಲ ಪಡೆದ ರೈತರು ಬೆಳೆವಿಮೆ ಮಾಡಿಸುವುದು ಕಡ್ಡಾಯವಾಗಿರುವುದಿಲ್ಲ. ಬೆಳೆವಿಮೆ ಮಾಡಲಿಚ್ಛಿಸದ ಸಾಲ ಪಡೆದಂತಹ ರೈತರು ಬೆಳೆವಿಮೆ ಮಾಡಿಸಲು ನಿಗಧಿಪಡಿಸಿರುವ ಅಂತಿಮ ದಿನಾಂಕಕ್ಕಿಂತ 7 ದಿನದ ಮುಂಚಿತವಾಗಿ ಸಂಬಂಧಪಟ್ಟ ಬ್ಯಾಂಕಿಗೆ ಓಪಿಟಿ ಔಟ್ ಎಂಬ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಈ ಅರ್ಜಿ ನೀಡಿದ ರೈತರನ್ನು ವಿಮೆ ಯೋಜನೆಯಿಂದ ಬ್ಯಾಂಕ್‍ನವರು ಹೊರಗಿಡಬೇಕಾಗುತ್ತದೆ. ಸಾಲ ಪಡೆದಿರುವ ರೈತರ ಪೈಕಿ ಓಪಿಟಿ ಔಟ್ ನಮೂನೆ ನೀಡದ ಉಳಿದ ಎಲ್ಲಾ ರೈತರನ್ನು ವಿಮಾ ಯೋಜನೆಯಡಿ ತರುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ಡಿ.ಸಿ.ಸಿ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಸ್ಪಂದಿಸುವಂತೆ ಕೋರಿದರು.
ರೈತರು ಕೃಷಿ ಭೂಮಿಯಲ್ಲಿ ಲಭ್ಯವಿರುವ ಬೆಳೆಗೆÉ ಮಾತ್ರ ವಿಮೆಗೆ ಒಳಪಡಿಸುವುದು ಸೂಕ್ತ. ಆದ್ದರಿಂದ ಬ್ಯಾಂಕ್ ಮತ್ತು ನಾಗರಿಕ ಸೇವಾ ಕೇಂದ್ರದವರು ನೋಂದಾಯಿಸುವ ಮುಂಚೆ ಈ ಬಗ್ಗೆ ರೈತರಿಗೆ ಹೆಚ್ಚಿನ ತಿಳಿವಳಿಕೆ ನೀಡಿ ವಿಮೆ ಮಾಡಿಸಲು ತಿಳಿಸಿದರು.
ಕಿರು ಮಾಹಿತಿ ಪತ್ರ ಬಿಡುಗಡೆ: ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್ ಬೀದರ ಮತ್ತು ಕೃಷಿ ಇಲಾಖೆ ಬೀದರ ಇವರು ಪ್ರಕಟಿಸಿದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಹಿಂಗಾರು 2020-21 ಕುರಿತ ಮಾಹಿತಿ ಪುಸ್ತಕವನ್ನು ಇದೆ ವೇಳೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಪಂ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಉಪ ಕೃಷಿ ನಿರ್ದೇಶಕರಾದ ಸೋಮಶೇಖರ ಬಿರಾದಾರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣ, ತೋಟಗಾರಿಕ ಇಲಾಖೆಯ ಅಧಿಕಾರಿ ಶ್ರೀಮಂತ ಬಿರಾದಾರ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಿ.ಎಮ್.ಕಮತಗಿ, ಕೃಷಿ ಅಧಿಕಾರಿಗಳಾದ ರಾಜಕುಮಾರ ಎಕ್ಕೇಲಿ, ಯುಎಸ್‍ಜಿಐಸಿನ ಜಿಲ್ಲಾ ಸಂಯೋಜಕರಾದ ವಿನಯಕುಮಾರ ಹಾಗೂ ಇತರರು ಇದ್ದರು.