ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಶೇ100 ಪ್ರತಿಶತ ಪರಿಹಾರ ಒದಗಿಸಿ:ಸಿದ್ರಾಮಯ್ಯ ಸ್ವಾಮಿ

ಬೀದರ, ಜು.15: ಫಸಲ್ ಬಿಮಾ ಯೋಜನೆಯಡಿ ದೂರು ಸಲ್ಲಿಸಿದ ಜಿಲ್ಲೆಯ ರೈತರಿಗೆ ಕಡಿಮೆ ಪರಿಹಾರ ಬರುತ್ತಿದೆ ಎಂಬ ದೂರುಗಳು ಬರುತ್ತಿವೆ ಆದ್ದರಿಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬಿಮಾ ಯೋಜನೆಯಡಿ ದೂರು ಸಲ್ಲಿಸಿದ ರೈತರಿಗೆ ಯಾವುದೇ ಹಂತವನ್ನು ಪರಿಗಣಿಸದೆ ವಿಮಾ ಮೊತ್ತವನ್ನು ಶೇ.100 ಪ್ರತಿಶತ ಪರಿಗಣಿಸುವಂತೆ ಬೀದರ ಕೃಷಿಕ ಸಮಾಜದ ವತಿಯಿಂದ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ ಹೇಳಿದರು.

ಅವರು ಶುಕ್ರವಾರ ಬೀದರ ಜಂಟಿ ಕೃಷಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಕೃಷಿಕ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೋಟಗಾರಿಕೆ ಇಲಾಖೆಯಲ್ಲಿ ಹನಿ ನೀರಾವರಿ ಯೋಜನೆಯಡಿಯಲ್ಲಿ ಸಾಮಾನ್ಯ ಜನರಿಗೆ ಶೇ.75% ಸಹಾಯಧನ, ಪ.ಜಾತಿ ಮತ್ತು ಪ.ಪಂಗಡದವರಿಗೆ ಶೇ.90% ಸಹಾಯಧನದಲ್ಲಿ ರೈತರು ತಮ್ಮ ಜಮೀನಿನಲ್ಲಿ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದ ಅವರು ಜಿಲ್ಲೆಯ ಕೃಷಿ ಸಮಾಜ ಭವನದ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಅಹ್ವಾನಿಸಲಾಗುವುದು ಎಂದರು.

ಬೀದರ ಜಂಟಿ ಕೃಷಿ ನಿರ್ದೇಶಕ ರತಿಂದ್ರ ಸೂಗುರ ಮಾತನಾಡಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯನ್ವಯ ರೈತರು ದೂರು ಸಲ್ಲಿಸಲು ನಾಲ್ಕು ಹಂತದಲ್ಲಿ ಮೊಳಕೆ ಹಂತ, ಬೆಳವಣಿಗೆ ಹಂತ, ಮಾಗುವ ಹಂತ ಮತ್ತು ಕೊಯ್ಲು ಹಂತ ಅವಕಾಶವಿದ್ದು, ರೈತರು ಮೊದಲನೇ ಹಂತವಾದ ಮೋಳಕೆ ಹಂತದಲ್ಲಿ ದೂರು ಸಲ್ಲಿಸಿದರೆ ವಿಮಾ ಮೊತ್ತದ (Sum Iಟಿsuಡಿeಜ) 45 ರಿಂದ 55 ಪ್ರತಿಶತ ಪರಿಗಣಿಸಲಾಗುತ್ತದೆ, ಹಾಗೇಯೇ ರೈತರು ಬೆಳವಣಿಗೆ ಹಂತದಲ್ಲಿ ದೂರು ನೀಡಿದರೆ 70 ರಿಂದ 75 ಪ್ರತಿಶತ ವಿಮಾ ಮೊತ್ತ ಪರಿಗಣಿಸಲಾಗುತ್ತದೆ. ಆದ್ದರಿಂದ ಬೀದರ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ರೈತರು ಮೊದಲನೇ ಹಂತವಾದ ಮೋಳಕೆ ಹಂತದಲ್ಲಿ ದೂರು ಸಲ್ಲಿಸಿದ್ದರಿಂದ ವಿಮಾ ಪರಿಹಾರ ಕಡಿಮೆ ಬಂದಿರುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು ರಾಜ್ಯ ಪ್ರತಿನಿಧಿ ಖಾಲಿ ಇರುವ ಹುದ್ದೆಗೆ ಹುಮನಾಬಾದ ತಾಲ್ಲೂಕಿನ ಮಾಡಗೊಳ್‍ದ ವಿಶ್ವನಾಥ ಮಾಣಿಕರಾವ ಪಾಟೀಲ್‍ಗೆ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಬಾಬುರೆಡ್ಡಿ ಪಾಟೀಲ್, ಖಜಾಂಚಿ ರಮೇಶ ಪಾಟೀಲ್, ಕೃಷಿಕ ಸಮಾಜದ ಪದಾಧಿಕಾರಿಗಳು, ತೋಟಗಾರಿಕೆ ಇಲಾಖೆ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.