ಫಸಲ್ ಬಿಮಾ ನೋಂದಣಿ | ರಾಜ್ಯದಲ್ಲೇ ಬೀದರ್ ಪ್ರಥಮ: ಸಚಿವ ಭಗವಂತ ಖೂಬಾ

ಬೀದರ್:ಆ.11: ‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ವಿರುದ್ಧ ಸಾಕಷ್ಟು ಅಪಪ್ರಚಾರ ನಡೆಸಿದರೂ ರೈತರು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ಸಾಕ್ಷಿ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಾಗಿರುವ ನೋಂದಣಿಯೇ ಸಾಕ್ಷಿ. ಪ್ರಸಕ್ತ ವರ್ಷ ರಾಜ್ಯದಲ್ಲಿಯೇ ಬೀದರ್‍ನಲ್ಲಿ ಅತಿ ಹೆಚ್ಚು ರೈತರು ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ನನ್ನ ಮೇಲೆ ರೈತರು ಇಟ್ಟಿರುವ ವಿಶ್ವಾಸವನ್ನು ಇದು ಎತ್ತಿ ತೋರಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ಫಸಲ್ ಬಿಮಾ ಯೋಜನೆಯಡಿ ಬೀದರ್ ಜಿಲ್ಲೆಯಲ್ಲಿ ಇವತ್ತಿನವರೆಗೆ 2,83,922 ಹಾಗೂ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನಲ್ಲಿ 53,745, ಚಿಂಚೋಳಿಯಲ್ಲಿ 21,716 ರೈತರು ನೋಂದಣಿ ಮಾಡಿಸಿದ್ದಾರೆ. ಇದು ರಾಜ್ಯದಲ್ಲಿಯೇ ಅತಿ ಹೆಚ್ಚು. ರೈತರ ಆಪ್ತರಕ್ಷಕನಾಗಿರುವ ಫಸಲ್ ಬಿಮಾ ಯೋಜನೆಯಡಿ ನಮ್ಮ ಜಿಲ್ಲೆಗೆ ಒಟ್ಟು ?550 ಕೋಟಿ ಪರಿಹಾರ ಬಂದಿದೆ ಎಂದು ಗುರುವಾರ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯೋಜನೆ ಕುರಿತು ಸಾಕಷ್ಟು ಅಪಪ್ರಚಾರ ಮಾಡಿದ್ದರು. ಜಿಲ್ಲೆಯ ಬುದ್ಧಿವಂತ ರೈತರು ಅದಕ್ಕೆ ಕಿವಿಗೊಟ್ಟಿಲ್ಲ. ಅವರ ಬೆಳೆಗಳ ರಕ್ಷಣೆ ಹಾಗೂ ಪರಿಹಾರದ ಹಿನ್ನೆಲೆಯಲ್ಲಿ ಯೋಚಿಸಿ ನೋಂದಣಿ ಮಾಡಿಸಿದ್ದಾರೆ. ಕಳೆದ ಸಾಲಿನಲ್ಲಿ ಹಾಳಾದ ಬೆಳೆಗಳಿಗೆ ಸುಮಾರು 1,36,000 ರೈತರಿಗೆ 51 ಕೋಟಿ ಪರಿಹಾರ ಬಂದಿರುತ್ತದೆ. ಜಿಲ್ಲೆಯ ಜನತೆ ಪ್ರತಿ ವರ್ಷ ಇದರ ಫಲಾನುಭವಿಗಳಾಗುತ್ತಿದ್ದಾರೆ. ಈ ಯೋಜನೆಯ ಯಶಸ್ಸು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೆಚ್ಚಿನ ನೋಂದಣಿಗೆ ರಾಷ್ಟ್ರೀಕೃತ ಬ್ಯಾಂಕ್, ಡಿ.ಸಿ.ಸಿ. ಬ್ಯಾಂಕ್, ಗ್ರಾಮ ಒನ್, ಸಿ.ಎಸ್.ಸಿ ಕೇಂದ್ರದವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಅತಿವೃಷ್ಟಿ ಅನಾವೃಷ್ಟಿ ಅಥವಾ ಇತರೆ ಕಾರಣಗಳಿಂದ ರೈತನ ಬೆಳೆ ಹಾಳಾದರೆ ಸೂಕ್ತ ಸಮಯಕ್ಕೆ ಸಮೀಕ್ಷೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಜರುಗಿಸಬೇಕು. ಹೆಚ್ಚಿನ ನಿಗಾ ವಹಿಸಬೇಕು. ಮುಂಬರುವ ದಿನಗಳಲ್ಲಿ ರೈತರ ಬೆಳೆಗಳನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದ್ದಾರೆ.