ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಇಲ್ಲ

ಬೆಂಗಳೂರು,ನ.೩- ಉಪ ಚುನಾವಣೆಯ ಫಲಿತಾಂಶಗಳು ಸರ್ಕಾರದ ಮೇಲೆ ಯಾವ ಪರಿಣಾಮವೂ ಬೀರಲ್ಲ. ಈ ಫಲಿತಾಂಶ ಮುಂದಿನ ಚುನಾವಣೆಗಳ ದಿಕ್ಸೂಚಿಯೂ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯ ಫಲಿತಾಂಶಗಳು ಮುಂದಿನ ಚುನಾವಣೆಯ ದಿಕ್ಸೂಚಿ ಎಂದು ವಿರೋಧ ಪಕ್ಷಗಳು ಹೇಳುವುದು ಸಹಜ. ಹಾಗಾದರೆ ಸಿಂದಗಿ ಫಲಿತಾಂಶ ಯಾವುದರ
ದಿಕ್ಸೂಚಿ ಅಲ್ಲ ೩೧ ಸಾವಿರ ಭಾರಿ ಮತಗಳ ಅಂತರದಿಂದ ಕಾಂಗ್ರೆಸ್ ಸೋತಿದೆ. ಅದನ್ನು ಕಾಂಗ್ರೆಸ್‌ನವರು ಮೊದಲು ನೋಡಿಕೊಳ್ಳಲಿ. ಹಾಗಾದರೆ ದಿಕ್ಸೂಚಿ ಸಿಂದಗಿಯಿಂದಲೇ ಆರಂಭವಾಗಬೇಕು ಎಂದರು.
ಉಪ ಚುನಾವಣೆಯ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ದೃಷ್ಟಿಕೋನ ತಮ್ಮದು ಎಂದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ
ಚುನಾವಣೆಗಳನ್ನು ಗೆದ್ದಿದ್ದರು. ಅದಾದ ಒಂದು ವರ್ಷದಲ್ಲೇ ಈ ಎರಡೂ ಕ್ಷೇತ್ರಗಳನ್ನು ಸೋಲುವ ಜತೆಗೆ ರಾಜ್ಯದಲ್ಲೇ ಕಾಂಗ್ರೆಸ್ ಸೋಲು ಅನುಭವಿಸಿತು.ಒಂದು ಉಪಚುನಾವಣೆ ಸೋಲು-ಗೆಲುವಿಗೆ ಹಲವು ಸ್ಥಳೀಯ ಕಾರಣಗಳು ಇರುತ್ತವೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಉಪ ಚುನಾವಣೆಗಳನ್ನು ಸೋತಿದ್ದಾರೆ ಎಂದು ನೆನಪು ಮಾಡಿದರು.
ಉಪ ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ, ಉಪ ಚುನಾವಣೆಯ ಫಲಿತಾಂಶಗಳಿಗೂ, ಸಾರ್ವತ್ರಿಕ ಚುನಾವಣೆಗಳಿಗೂ ಸಂಬಂಧವಿಲ್ಲ. ೨೦೧೨ ರಿಂದ ೨೦೧೯ರ ಮಧ್ಯೆ ಎನ್‌ಡಿಎ ಕೂಡ ಉಪ ಚುನಾವಣೆಗಳಲ್ಲಿ ಸೋಲು ಅನುಭವಿಸಿತ್ತು. ಆದರೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಮೊದಲಿಗಿಂತ ಹೆಚ್ಚು ಸ್ಥಾನವನ್ನು ಗಳಿಸಿತು. ಹಾಗಾಗಿ, ಉಪಚುನಾವಣೆಯ ಫಲಿತಾಂಶವನ್ನು ಇಟ್ಟುಕೊಂಡು ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದೆಲ್ಲ ಹೇಳುವುದು ಅರ್ಥವಿಲ್ಲದ್ದು ಎಂದರು.
ಉಪಚುನಾವಣೆಯ ಸೋಲು-ಗೆಲುವನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸುತ್ತೇನೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಒಂದು ಕಡೆ ಸೋಲಾಗಿದೆ. ಮತ್ತೊಂದು ಕಡೆ ಗೆಲುವು ಸಿಕ್ಕಿದೆ. ಸಿಂದಗಿ ಕ್ಷೇತ್ರದ ಎಲ್ಲ ಮತದಾರರಿಗೂ ಹಾಗೂ ಶ್ರಮಪಟ್ಟ ಕಾರ್ಯಕರ್ತರು, ನಾಯಕರುಗಳಿಗೆ ಅಭಿನಂದನೆ ಸಲ್ಲಿಸಿದರು.
ಹಾನಗಲ್‌ನ ಸೋಲಿನ ಕಾರಣಗಳಿಂದ ಮುಂದಿನ ದಿನಗಳಲ್ಲಿ ವಿಶ್ಲೇಷಣೆ ಮಾಡಿ ಸರಿಪಡಿಸಿಕೊಳ್ಳುತ್ತೇವೆ. ಇಲ್ಲಿ ಸೋಲಿನ ಅಂತರವನ್ನು ಸಾಧಿಸಬಹುದಿತ್ತು. ಮುಂದೆ ಎಲ್ಲವೂ ಸರಿ ಹೋಗಲಿದೆ ಎಂದರು.
ಹಾನಗಲ್‌ನಲ್ಲಿ ದಿ. ಸಿ.ಎಂ ಉದಾಸಿ ಅವರಿಗಿದ್ದ ಗಟ್ಟಿ ಬೆಂಬಲ ನೆಲೆಯನ್ನು ಮುಂದುವರೆಸಲು ಈ ಉಪಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ಸಾಧ್ಯವಾಗಿಲ್ಲ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಮಾನೆ ಅವರು ಕೋವಿಡ್ ಸಂದರ್ಭದಲ್ಲಿ ಜನಪರ ಕೆಲಸ ಮಾಡಿದರು ಎಂಬುದು ಜನರ ಮನಸ್ಸಿನಲ್ಲಿತ್ತು. ಇವೆರೆಡೂ ಕಾರಣಗಳಿಂದ ಹಾನಗಲ್‌ನಲ್ಲಿ ಸೋಲಾಗಿದೆ ಎಂದು ವ್ಯಾಖ್ಯಾನಿಸಿದರು.
ಆರೋಪ ಪಟ್ಟಿ ಸಲ್ಲಿಸಿದ್ದೇವೆ
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಆರೋಪ ಮಾಡಿದ್ದಾರೆ. ಅವರೇ ದಾಖಲೆ ಬಿಡುಗಡೆ ಮಾಡಬೇಕು. ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಅದು ಈಗ ಸಾರ್ವಜನಿಕ ದಾಖಲೆಯಾಗಿದೆ. ಯಾವುದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
೧೦೦ ದಿನಕ್ಕೆ ಅಂತಹ ಮಹತ್ವವಿಲ್ಲ
ಮುಖ್ಯಮಂತ್ರಿಯಾಗಿ ೧೦೦ ದಿನ ಪೂರೈಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು ೧೦೦ ದಿನ ಎನ್ನುವುದು ವಿಶೇಷವೇನಲ್ಲ. ೧೦೦ ದಿನ ಒಂದು ವರ್ಷದ ಹಾಗೆ ಪ್ರಮುಖ ಘಟ್ಟವೂ ಅಲ್ಲ. ಆದರೆ, ೧೦೦ ದಿನಗಳಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಯಾವ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಿದ್ದೇವೆ. ಈ ಎಲ್ಲದರ ಬಗ್ಗೆಯೂ ಸ್ಥೂಲ ಮಾಹಿತಿ ಕೊಡುವ ಕೆಲಸ ಮಾಡುತ್ತೇನೆ ಎಂದರು.
ಪ್ರತಿ ವರ್ಷ ದೀಪಾವಳಿಯನ್ನು ಹುಬ್ಬಳ್ಳಿಯಲ್ಲಿ ಆಚರಿಸುತ್ತೇನೆ. ಇಂದು ಹಿರಿಯರ ಹಬ್ಬ, ನಾಳೆ ದೀಪಾವಳಿ ಮಾಡಿ ನಾಡಿದ್ದು ಬೆಂಗಳೂರಿಗೆ ವಾಪಸ್ ಬರುತ್ತೇನೆ ಎಂದರು.
ಶುಭಾಶಯ
ನಾಡಿನ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಸಂದರ್ಭದಲ್ಲಿ ದೀಪಾವಳಿ ಶುಭಾಶಯ ಹೇಳಿದರು.