ಫಲಿತಾಂಶದ ಬಳಿಕ ಪ್ರತಿಪಕ್ಷಗಳ ಶಕ್ತಿ ತಿಳಿಯುತ್ತದೆ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.30:- ವಿರೋಧ ಪಕ್ಷಗಳ ಐಎನ್‍ಡಿಐಎ ಒಕ್ಕೂಟಕ್ಕೆ ಈ ಚುನಾವಣೆಯಲ್ಲಿ ಗೆಲ್ಲುವ ಪ್ರಚಾರ, ಶಕ್ತಿ, ಪ್ರಭಾವ ಇತ್ತೇ ಎಂಬುದು ಚುನಾವಣೆಯ ಫಲಿತಾಂಶದ ನಂತರ ತಿಳಿಯುತ್ತದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ತಿಳಿಸಿದರು.
ಅಶೋಕಪುರಂ ಅಭಿಮಾನಿಗಳ ಬಳಗ, ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ಹಾಗೂ ವಿಶ್ವಮೈತ್ರಿ ಬುದ್ಧ ವಿಹಾರದ ಸಹಯೋಗದಲ್ಲಿ 2024ರ ಚುನಾವಣೋತ್ತರ ಭಾರತ ಕುರಿತು ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2024ರಲ್ಲಿ ಐಎನ್‍ಡಿಐಎ ಒಕ್ಕೂಟ ಅಥವಾ ಎನ್‍ಡಿಎ ಒಕ್ಕೂಟ ಅಧಿಕಾರಕ್ಕೆ ಬಂದರೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವವರ ಮೇಲಿನ ಜವಾಬ್ದಾರಿ ಕಿಂಚಿತ್ತೂ ಕಡೆಮೆಯಾಗುವುದಿಲ್ಲ. ದೇಶದ ಜನರು ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸದಾ ಜಾಗೃತವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಒಂದು ವೇಳೆ 2024ರ ಲೋಕಸಭಾ ಚುನಾವಣೆಯಲ್ಲಿ ಐಎನ್‍ಡಿಐಎ ಒಕ್ಕೂಟ ಅಧಿಕಾರಕ್ಕೆ ಬಂದರೆ ಭ್ರಮನಿರಸನಗೊಳ್ಳುವ ಬಿಜೆಪಿ ಮತ್ತು ಸಂಘಪರಿವಾರ ಐಎನ್‍ಡಿಐಎ ಒಕ್ಕೂಟಕ್ಕೆ ಆಡಳಿತ ನಡೆಸಲು ಅವಕಾಶ ಕೊಡುವುದಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸಲು ಸಕಲೆಂಟು ತಂತ್ರ-ಕುತಂತ್ರಗಳನ್ನು ನಡೆಸುತ್ತದೆ ಎಂದರು.
ಈಗಾಗಲೇ ಸಂವಿಧಾನದ ನಾಶಕ್ಕೆ ಕೈ ಹಾಕಿದ್ದ ಬಿಜೆಪಿ ಒಂದು ವೇಳೆ ಈ ಚುನಾವಣೆಯಲ್ಲಿ ಸರಳ ಬಹುಮತದ ಮೂಲಕ ಅಧಿಕಾರಕ್ಕೆ ಬಂದರೆ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ತೆಗೆದುಹಾಕಿ ಮತ್ತೆ ಮನುಸ್ಮøತಿ ಆಧಾರಿತ ಅಸಮಾನತೆ ಮತ್ತು ಅನ್ಯಾಯದ ಆಡಳಿತವನ್ನು ಜಾರಿಗೆ ತರುತ್ತಾರೆ ಎಂದು ಹೇಳಿದರು.
ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ ಕಡಿಮೆ ಮಾಡಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಪುಲ್ವಾಮ ದಾಳಿಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಅಧಿಕಾರಕ್ಕೆ ಬಂದರು. ಈ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯ ರಾಮಮಂದಿರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರು. ಬಿಜೆಪಿ ಗೆದ್ದರೂ ಸೋತರೂ ಮೋದಿ ಹವಾ ಈಗ ಕಡಿಮೆಯಾಗಿದೆ. ಆದ್ದರಿಂದಲೇ ಅವರು ಚುನಾವಣಾ ಭಾಷಣಗಳಲ್ಲಿ ಪ್ರಚೋಧನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಸದಸ್ಯ ಕೆ.ಎನ್.ಲಿಂಗಪ್ಪ ಮಾತನಾಡಿ, ಜವಹಾರ್‍ಲಾಲ್ ನೆಹರು ಸಾಕಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದರು. ಆದರೆ, ಹತ್ತು ವರ್ಷಗಳ ಆಡಳಿತದ ಅವಧಿಯಲ್ಲಿ ಒಂದು ಸಾರ್ವಜನಿಕ ಸಂಸ್ಥೆಯನ್ನೂ ಸ್ಥಾಪಿಸದ ನರೇಂದ್ರ ಮೋದಿ ಬಹುತೇಕ ಸಾರ್ವಜನಿಕ ಸಂಸ್ಥೆಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿದರು. ಕೇಂದ್ರ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಕಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಲಿಲ್ಲ. ಹಸಿ ಸುಳ್ಳುಗಳನ್ನು ಹೇಳುವುದನ್ನು ಬಿಟ್ಟು ನರೇಂದ್ರಮೋದಿ ಯಾವ ಕೆಲಸವನ್ನೂ ಮಾಡಿಲ್ಲ ಎಂದರು.
ಹಿರಿಯ ಸಾಹಿತಿ ಕೆ.ಎಸ್.ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ಮೆಸ್ಕೋ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆÇ್ರ.ಶಬೀರ್ ಮುಸ್ತಫಾ, ಸಾಹಿತಿ ಸಿದ್ದಸ್ವಾಮಿ, ದಲಿತ ವೆಲ್ಛೇರ್ ಟ್ರಸ್ಟ್ ಗೌರವಾಧ್ಯಕ್ಷ ಪೆÇ್ರ.ಟಿ.ಎಂ.ಮಹೇಶ್ ಉಪಸ್ಥಿತರಿದ್ದರು.