ಫಲಿತಾಂಶದತ್ತ ಎಲ್ಲರ ಚಿತ್ತ

ಕಲಬುರಗಿ,ಮೇ.12-ಅಂತು ಇಂತು ಚುನಾವಣೆಯಂತು ಮುಗಿಯಿತು. ಇನ್ನೇನಿದ್ದರೂ ಫಲಿತಾಂಶದೇ ಚಿಂತೆ. ಯಾವ ಪಕ್ಷ ಎಷ್ಟು ಮತಗಳ ಅಂತರದಿಂದ ಗೆಲವು ಸಾಧಿಸಲಿದೆ. ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ, ಅತಂತ್ರ ಸ್ಥಿತಿ ಏನಾದರೂ ನಿರ್ಮಾಣವಾಗಲಿದೆಯೇ ? ಯಾವ ಯಾವ ಕ್ಷೇತ್ರಗಳಲ್ಲಿ ಯಾವ, ಯಾವ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ, ಯಾರು ಸೋಲನ್ನು ಅನುಭವಿಸಲಿದ್ದಾರೆ. ಗೆದ್ದರೂ ಎಷ್ಟು ಮತಗಳ ಅಂತರದಿಂದ ಗೆಲ್ಲಬಹುದು ಎಂಬೆಲ್ಲ ಚಿಂತೆ ಇದೀಗ ಮತದಾರರನ್ನು ಕಾಡುತ್ತಲಿದೆ. ಹೀಗಾಗಿ ಎಲ್ಲರ ಚಿತ್ತ ಚುನಾವಣೆಯ ಫಲಿತಾಂಶದತ್ತ ನೆಟ್ಟಿದೆ. ನಾಳೆ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರ ಬೀಳುವ ಸಾಧ್ಯತೆಗಳಿದ್ದು, ಈ ಎಲ್ಲಾ ಕುತೂಹಲ, ಚಿಂತೆಗೆ ಅಂತಿಮ ತೆರೆ ಬೀಳಲಿದೆ.
ಈ ಹಿಂದೆ ನಡೆದ ಅನೇಕ ಚುನಾವಣೆಗಳು ಚುನಾವಣೆಯ ಫಲಿತಾಂಶದ ಬಗ್ಗೆ ಇಷ್ಟೊಂದು ಕುತೂಹಲ ಕೆರಳಿಸಿರಲಿಲ್ಲ ಅನಿಸುತ್ತದೆ. ಆದರೆ, ಈ ಬಾರಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಮಾತ್ರ ಎಲ್ಲ ಪಕ್ಷಗಳು ಮತ್ತು ಮತದಾರರನ್ನು ತುದಿಗಾಲಲ್ಲಿ ನಿಲ್ಲಿಸಿವೆ. ಚುನಾವಣೋತ್ತರ ಮತ್ತು ಚುನಾವಣೆ ನಂತರ ನಡೆದ ಮತಗಟ್ಟೆಯ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ, ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಹೇಳುವುದರ ಜೊತೆಗೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ ಎಂದೂ ಹೇಳಿವೆ. ಇನ್ನು ಕೆಲ ಸಮೀಕ್ಷೆಗಳು ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದಿವೆ. ಹೀಗಾಗಿ ರಾಜಕೀಯ ಪಕ್ಷಗಳ ನಾಯಕರು ಮಾತ್ರವಲ್ಲದೆ ಮತದಾರರು ಸಹ ನಿಜವಾಗಿಯೂ ಫಲಿತಾಂಶ ಏನಾಗಬಹುದು ಎಂದು ತೀವ್ರ ಕುತೂಹಲದಿಂದ ಕಾಯುವಂತಾಗಿದೆ.
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಲಿದೆ, ಯಾವ ಪಕ್ಷದ ಅಭ್ಯರ್ಥಿ ಈ ಬಾರಿ ಗೆಲವು ಸಾಧಸಲಿದ್ದಾರೆ. ಯಾವ ಪಕ್ಷದ ಅಭ್ಯರ್ಥಿ ಸೋಲನ್ನು ಅನುಭವಿಸಲಿದ್ದಾರೆ. ಯಾವ ಯಾವ ಕಾರಣಗಳಿಂದ ಈ ಪಕ್ಷದ ಅಭ್ಯರ್ಥಿ ಸೋಲಬಹುದು, ಯಾವ ಯಾವ ಕಾರಣಗಳಿಂದ ಆ ಪಕ್ಷದ ಅಭ್ಯರ್ಥಿ ಗೆಲ್ಲಬಹುದು ಎಂಬ ಚರ್ಚೆಗಳಿಗೆ ಕೊನೆ ಇಲ್ಲದಂತಾಗಿದೆ.
ಒಟ್ಟಾರೆ ಈ ಎಲ್ಲಾ ಚರ್ಚೆ, ತರ್ಕ, ಕುತೂಹಲಗಳಿಗೆ ನಾಳೆ ಮಧ್ಯಾಹ್ನದ ಹೊತ್ತಿಗೆ ತೆರೆ ಬೀಳುವ ಸಾಧ್ಯತೆಗಳಿದ್ದು, ಸಾಯಂಕಾಲದ ಹೊತ್ತಿಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಅಲ್ಲಿಯವರೆಗೆ ಕಾಯಬೇಕಾದದ್ದು ಅನಿವಾರ್ಯವಾಗಿದೆ.