ಫಲಾನುಭವಿಗಳ ಸಮ್ಮೇಳನಕ್ಕೆ ಅತಿ ಹೆಚ್ಚು ಫಲಾನುಭವಿಗಳನ್ನು ಸೇರಿಸಿ – ಡಿ.ಸಿ

ರಾಯಚೂರು,ಮಾ.3- ಮಾ.೧೩ರಂದು ಜಿಲ್ಲೆಯಲ್ಲಿ  ಫಲಾನುಭವಿಗಳ ಸಮ್ಮೇಳನವನ್ನು ಆಯೋಜನೆ ಮಾಡಲಾಗುತ್ತಿದ್ದು, ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿರುವ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಸಮ್ಮೇಳನಕ್ಕೆ ಕಡ್ಡಾಯವಾಗಿ ಕರೆತರುವ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಅಧಿಕಾರಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಫಲಾನುಭವಿಗಳ ಸಮ್ಮೇಳನ ಕುರಿತು ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಸರ್ಕಾರದಿಂದ ಮಂಜೂರಾದ ಫಲಾನುಭವಿಗಳನ್ನು ಮಾ.೧೩ರಂದು ನಡೆಯುವ ಸಮ್ಮೇಳನಕ್ಕೆ ಕರೆತರಬೇಕು. ತಾಲೂಕುವಾರು ವಿವಿಧ ಯೋಜನೆಗಳ  ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ, ಮಾಹಿತಿ ಸಲ್ಲಿಸುವಂತೆ ತಿಳಿಸಿದರು.

ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಪ್ರಮುಖ ಇಲಾಖೆಗಳಲ್ಲಿರುವ ಈ ವರ್ಷದ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯಗಳನ್ನು ಸಮ್ಮೇಳನದಲ್ಲಿ ಸಾಂಕೇತಿಕವಾಗಿ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

ಕೃಷಿ ಇಲಾಖೆಯ ರಾಜ್ಯ ಸರ್ಕಾರದ ಯೋಜನೆಗಳಾದ ರೈತ ವಿದ್ಯಾನಿಧಿ ಯೋಜನೆ, ರೈತ ಶಕ್ತಿ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳನ್ನು ನೀಡಬೇಕು. ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಸೌಲಬ್ಯವನ್ನು ನೀಡುವಂತೆ ಸೂಚನೆ ನೀಡಿದರು.

ಆರೋಗ್ಯ ಇಲಾಖೆಯಿಂದ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹಾಗೂ ಆಯುಷ್ಮಾನ್ ಭಾರತ ಯೋಜನೆಯ ವಿವಿಧ ಸೌಲಭ್ಯಗಳಿಗೆ ನೊಂದಣಿ ಮಾಡಿಕೊಳ್ಳುವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಇದೇ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಫಲಾನುಭವಿಗಳ ಸಮ್ಮೇಳನಕ್ಕೆ ಫಲಾನುಭವಿಗಳು ತಪ್ಪದಂತೆ ಕಡ್ಡಾಯವಾಗಿ ನಿಮಗೆ ನೀಡಿದ ಗುರಿಯನ್ನು ತಲುಪಬೇಕು. ಫಲಾನುಭವಿಗಳನ್ನು ಕರೆತರುವಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸುವಂತೆ ತಿಳಿಸಿದರು.

ಮಾ.೬ರೊಳಗಾಗಿ ಪ್ರತಿ ಇಲಾಖೆಯ ಅಧಿಕಾರಿಗಳು ಎಷ್ಟು ಫಲಾನುಭವಿಗಳು ಸಮ್ಮೇಳನಕ್ಕೆ ಬರುತ್ತಾರೆ. ಅದರಲ್ಲಿ ಸಾಂಕೇತಿಕವಾಗಿ ವೇದಿಕೆಯ ಮೇಲೆ ಪ್ರಮಾಣ ಪತ್ರ ಹಾಗೂ ವಿವಿಧ ಯೋಜನೆಗಳ ಸಲಕರಣೆಗಳನ್ನು ನೀಡುವ ಕುರಿತು ಹಾಗೂ ಇಲಾಖೆಗಳಿಂದ ಸ್ಥಾಪಿಸಲಾಗುವ ಮಳಿಗೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಸಿದ್ದಪಡಿಸಿಕೊಳ್ಳಬೇಕು ಮತ್ತು ವರದಿಯನ್ನು ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗೆ ಸಲ್ಲಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಗುರುನಾಥ, ಜಿ.ಪಂ ಯೋಜನಾ ನಿರ್ದೇಶಕ ಪ್ರಕಾಶ.ವಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.