ಫಲಾನುಭವಿಗಳ ಸಮಾವೇಶ ಯಶಸ್ವಿಗೆ ಸಹಕರಿಸಿ

ಚಿತ್ರದುರ್ಗ.ಮಾ.೩; ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದಿರುವ ಫಲಾನುಭವಿಗಳ ಸಮಾವೇಶವನ್ನು ಮಧ್ಯ ಕರ್ನಾಟಕದ ಚಿತ್ರದುರ್ಗದಲ್ಲಿ ಇದೇ ಮಾರ್ಚ್ 4ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುತ್ತಿದ್ದು, ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಸಮಾವೇಶವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಯಶಸ್ವಿಗೊಳಿಸಬೇಕು ಎಂದು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಫಲಾನುಭವಿಗಳ ಸಮಾವೇಶದ ಪೂರ್ವಸಿದ್ಧತಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಜಿಲ್ಲೆಯಲ್ಲಿ  ಲಕ್ಷಾಂತರ ಜನರು ವಿವಿಧ ಸವಲತ್ತುಗಳನ್ನು ಪಡೆದು ಫಲಾನುಭವಿಗಳಾಗಿದ್ದಾರೆ. ಫಲಾನುಭವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳನ್ನು ಸಮಾವೇಶಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಕರೆತರುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮುತುವರ್ಜಿಯಿಂದ ಸಕ್ರಿಯವಾಗಿ ತೊಡಗಿ, ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.